ಉಳ್ಳಾಲ: ಮಂಗಳೂರು ದಕ್ಷಿಣ ಉಪವಿಭಾಗ ಸಹಾಯಕ ಪೊಲೀಸ್ ಆಯುಕ್ತರ (ಎಸಿಪಿ) ಕಚೇರಿಯ ಅಂಗಣದಲ್ಲಿರುವ ಶ್ರೀ ಮಹಾಲಕ್ಷ್ಮೀ ಶ್ರೀ ಮಹಾಲಕ್ಷ್ಮಿ ಗಣಪತಿ ದೇವಸ್ಥಾನಕ್ಕೆ ನುಗ್ಗಿದ ಕಳ್ಳರು ದೇವಿಯ ವಿಗ್ರಹದ ಬೆಲೆಬಾಳುವ ಚಿನ್ನಾಭರಣ, ಬೆಳ್ಳಿ ಪ್ರಭಾವಳಿಗಳನ್ನು ದೋಚಿರುವ ಘಟನೆ ಬುಧವಾರ ತಡರಾತ್ರಿ ಕಲ್ಲಾಪುವಿನ ಬೊಡಂಗಿಲ ಎಂಬಲ್ಲಿ ನಡೆದಿದೆ.
Sponsoredಕಲ್ಲಾಪು ಬೊಡಂಗಿಲದಲ್ಲಿರುವ ಎಸಿಪಿಯವರ ಕಚೇರಿ ಕಟ್ಟಡದ ಅಂಗಣದಲ್ಲೇ ಇರುವ ದೇವಸ್ಥಾನದಲ್ಲಿ ಚಿನ್ನಾಭರಣ ಕಳವಾಗಿದೆ. ಮಹಾಲಕ್ಷ್ಮಿ ವಿಗ್ರಹದ ಕತ್ತಲ್ಲಿದ್ದ ಚಿನ್ನದ ಕರಿಮಣಿ, ಚಿನ್ನದ ಸರ, ಪೆಂಡೆಂಟ್, ತಾಳಿ ಮತ್ತು ವಿಗ್ರಹದ ಬೆಳ್ಳಿ ಕವಚ ಸೇರಿ ಲಕ್ಷಾಂತರ ರೂಪಾಯಿ ಕಳುವಾಗಿದೆ.
ಗರ್ಭಗುಡಿಯೊಳಗಿದ್ದ ಪಂಚಲೋಹದ ಪ್ರಭಾವಳಿ ಹಾಗೂ ಕೊಡವನ್ನ ಕಳ್ಳರು ಅಲ್ಲೇ ಬಿಟ್ಟು ಹೋಗಿದ್ದಾರೆ. ಗುರುವಾರ ಮುಂಜಾನೆ 4.30 ರ ಸುಮಾರಿಗೆ ಪ್ರಧಾನ ಅರ್ಚಕರಾದ ಬಾಲಕೃಷ್ಣ ಭಟ್ ಅವರು ಕ್ಷೇತ್ರಕ್ಕೆ ಪೂಜೆಗೆಂದು ಬಂದಾಗ ಗರ್ಭಗುಡಿಯ ಬೀಗ ಒಡೆದಿರುವುದು ಬೆಳಕಿಗೆ ಬಂದಿದೆ.
ಘಟನಾ ಸ್ಥಳಕ್ಕೆ ಉಳ್ಳಾಲ ಪೊಲೀಸರು, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ಮಾಡಿ ಪ್ರಕರಣ ದಾಖಲು ಮಾಡಿದ್ದಾರೆ.




