ಧರ್ಮಸ್ಥಳದಲ್ಲಿ ಬಿವೈ ವಿಜಯೇಂದ್ರ ಸುದ್ದಿಗೋಷ್ಠಿ – ಡಿಕೆಶಿ ಜೊತೆಗಿನ ಸಂಬಂಧದ ಬಗ್ಗೆ ಸ್ಪಷ್ಟೀಕರಣ!!
ಧರ್ಮಸ್ಥಳದಲ್ಲಿ ಅಡ್ಡ ಮತದಾನದ ಆಣೆ, ಪ್ರಮಾಣವನ್ನು ರದ್ದು ಮಾಡಿದ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದಾರೆ. ಈ ಬಳಿಕ ಅವರು ಸುದ್ದಿಗೋಷ್ಠಿ ನಡೆಸಿ ಅಡ್ಡ ಮತದಾನ ಆರೋಪಗಳಿಗೆ ಉತ್ತರ ಹಾಗೂ ಡಿಕೆ ಶಿವಕುಮಾರ್ ಜೊತೆಗಿರುವ ಸಂಬಂಧದ ಕುರಿತು ಸ್ಪಷ್ಟೀಕರಣ ನೀಡಿದ್ದಾರೆ.
Sponsoredಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಜಯೇಂದ್ರ ಅವರು ನನ್ನ ಮತ್ತು ಡಿ.ಕೆ. ಶಿವಕುಮಾರ್ ಮಧ್ಯೆ ಯಾವುದೇ ರೀತಿಯ ವ್ಯವಹಾರವೂ ಇಲ್ಲ, ಆತ್ಮೀಯತೆಯೂ ಇಲ್ಲ. ಅವರು ಕೆಪಿಸಿಸಿ ಅಧ್ಯಕ್ಷರಾಗಿದ್ದಾಗ ಒಬ್ಬ ರಾಜಕಾರಣಿಯಾಗಿ ನೀಡಬೇಕಾದ ಮರ್ಯಾದೆಯನ್ನು ಮಾತ್ರ ನಾನು ನೀಡಿದ್ದೇನೆ ಅಷ್ಟೇ ಎಂದು ಹೇಳಿದ್ದಾರೆ.
ಪರಿಷತ್ ಚುನಾವಣೆಯಲ್ಲಿ ನಡೆದ ಅಡ್ಡಮತದಾನದ ಬೆನ್ನಲ್ಲೇ ಕೇಳಿಬರುತ್ತಿರುವ ಆರೋಪಗಳಿಗೆ ಉತ್ತರಿಸಿದ ಅವರು, ಅಡ್ಡ ಮತದಾನ ನಡೆದಾಗ ಅದಕ್ಕೆ ನಾನೇ ಕಾರಣ ಎಂಬ ಚರ್ಚೆಗಳನ್ನು ಸೃಷ್ಟಿಸಲಾಗುತ್ತಿದೆ. ರಾಜ್ಯದ ಬಿಜೆಪಿ ಅಧ್ಯಕ್ಷರು ಮತ್ತು ರಾಜ್ಯದ ಮುಖ್ಯಮಂತ್ರಿಗಳು ಜೊತೆಯಾಗಿದ್ದಾರೆ ಎಂಬ ಅಪಪ್ರಚಾರ ಮಾಡಲಾಗುತ್ತಿದೆ. ಆದರೆ ಡಿ.ಕೆ. ಶಿವಕುಮಾರ್ ಮತ್ತು ನನ್ನ ಮಧ್ಯೆ ಯಾವುದೇ ವ್ಯವಹಾರವಿಲ್ಲ. ನನ್ನ ವಿರುದ್ಧ ಯಾರು ಅಪಪ್ರಚಾರ ಮಾಡುತ್ತಿದ್ದಾರೋ, ಅವರಿಗೆ ಆ ಭಗವಂತನೇ ಒಳ್ಳೆಯ ಬುದ್ಧಿ ಕೊಡಲಿ ಎಂದು ಮಂಜುನಾಥ ಸ್ವಾಮಿಯಲ್ಲಿ ಪ್ರಾರ್ಥಿಸಿದ್ದೇನೆ ಎಂದು ತಿರುಗೇಟು ನೀಡಿದರು.
ಅಲ್ಲದೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರ ಆಶೀರ್ವಾದದಿಂದ ರಾಜ್ಯಾಧ್ಯಕ್ಷನ ಜವಾಬ್ದಾರಿ ಸಿಕ್ಕಿದ್ದು, ಪಕ್ಷಕ್ಕೆ ದ್ರೋಹ ಮಾಡುವ ಅಥವಾ ಕೀಳುಮಟ್ಟದ ರಾಜಕೀಯ ಮಾಡುವ ಪ್ರಶ್ನೆಯೇ ಇಲ್ಲ. ಕಾಂಗ್ರೆಸ್ ಉದ್ದೇಶಪೂರ್ವಕವಾಗಿ ವಿವಿಧ ಹೆಸರುಗಳನ್ನು ತೇಲಿಬಿಟ್ಟು ಬಿಜೆಪಿ ಶಾಸಕರ ಬಗ್ಗೆ ಅನುಮಾನ ಮೂಡಿಸುವ ಪ್ರಯತ್ನ ಮಾಡುತ್ತಿದೆ. ನಮ್ಮೊಳಗೂ ಅನುಮಾನದ ವಾತಾವರಣ ನಿರ್ಮಾಣವಾಗಿರುವುದು ನಿಜ. ಆದರೆ, ಸತ್ಯ ಇಂದು ಅಲ್ಲದಿದ್ದರೂ ನಾಳೆ ಹೊರಬರುತ್ತದೆ. ಕೇಂದ್ರ ನಾಯಕತ್ವಕ್ಕೂ ಎಲ್ಲ ಮಾಹಿತಿ ಇದೆ. ನನಗೆ ಯಾವುದೇ ತನಿಖಾ ವರದಿ ಬಂದಿಲ್ಲ ಎಂದು ತಿಳಿಸಿದರು.
ನಾನು ಯಾವುದೇ ತಪ್ಪು ಮಾಡಿಲ್ಲ. ಒಬ್ಬ ಭಕ್ತನಾಗಿ ಧರ್ಮಸ್ಥಳಕ್ಕೆ ಬಂದಿದ್ದೇನೆ. ಸಮಯ ಬಂದಾಗ ಎಲ್ಲ ಸತ್ಯವೂ ಹೊರಬರುತ್ತದೆ. ಎಲ್ಲವನ್ನೂ ಕಾಲವೇ ನಿರ್ಧರಿಸುತ್ತದೆ ಎಂದು ವಿಜಯೇಂದ್ರ ಹೇಳಿದರು. ಈ ವೇಳೆ, ಈ ಸಂದರ್ಭದಲ್ಲಿ ಶಾಸಕರುಗಳಾದ ಹರೀಶ್ ಪೂಂಜ, ಯಶಪಾಲ್ ಸುವರ್ಣ, ರಾಜೇಶ್ ನಾಯ್ಕ್ , ವೇದವ್ಯಾಸ ಕಾಮತ್, ಡಾ. ಭರತ್ ಶೆಟ್ಟಿ, ಭಾಗೀರಥಿ ಮುರುಳ್ಯ ಸೇರಿದಂತೆ ಕರಾವಳಿ ಭಾಗದ ಶಾಸಕರು, ಪಕ್ಷದ ಪ್ರಮುಖ ನಾಯಕರು ಉಪಸ್ಥಿತರಿದ್ದರು.




