ಶನಿವಾರ, 24 ಅಕ್ಟೋಬರ್ 2026

ಬೆಂಗಳೂರಲ್ಲಿ ‘ಚೈನ್ ಸ್ನ್ಯಾಚಿಂಗ್’ಗೆ ಬ್ರೇಕ್: ಮಹಿಳೆ ಮೇಲೆ ದಾಳಿಗೈದ ಖದೀಮರಿಬ್ಬರ ಬಂಧನ!

ಬೆಂಗಳೂರು: ನಗರದಲ್ಲಿ ಸರಗಳ್ಳತನ ನಡೆಸುತ್ತಿದ್ದ ಆರೋಪದ ಮೇಲೆ ಪೀಣ್ಯ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಬಂಧಿತರನ್ನು ಪ್ರೇಮ್ ಕುಮಾರ್ ಹಾಗೂ ಯಶವಂತ್ ಎಂದು ಗುರುತಿಸಲಾಗಿದೆ.

ಆಗಸ್ಟ್ 12ರಂದು ದೊಡ್ಡಬಿದರಕಲ್ಲು ಬಳಿ ವಿಜಯಮ್ಮ ಎಂಬ ಮಹಿಳೆ ಒಂಟಿಯಾಗಿ ತೆರಳುತ್ತಿದ್ದ ವೇಳೆ ಬೈಕ್‌ನಲ್ಲಿ ಬಂದ ಇಬ್ಬರು ಆರೋಪಿಗಳು ಆಕೆಯನ್ನು ಹಿಂಬದಿಯಿಂದ ಹಿಡಿದು ಕೆಳಗೆ ಬೀಳಿಸಿ, ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದರು.

ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೀಣ್ಯ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಆರೋಪಿಗಳು ಈ ಹಿಂದೆಯೂ ಹಲವು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ ಎನ್ನಲಾಗಿದೆ.

ಅಪ್ರಾಪ್ತರಾಗಿದ್ದಾಗಲೇ ಬೈಕ್ ಕಳ್ಳತನಕ್ಕೆ ಇಳಿದಿದ್ದ ಆರೋಪಿಗಳು ಸುಮಾರು 8 ವಾಹನಗಳನ್ನು ಕದ್ದಿದ್ದರು ಎನ್ನಲಾಗಿದೆ. ಬಳಿಕ ರಿಮ್ಯಾಂಡ್ ಹೋಮ್‌ನಿಂದ ಬಿಡುಗಡೆಯಾದ ನಂತರ ವಯಸ್ಕರಾದ ಮೇಲೆ ಸರಗಳ್ಳತನ ಮುಂದುವರಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಇದೀಗ ಇಬ್ಬರನ್ನೂ ಬಂಧಿಸಿರುವ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.