ಶನಿವಾರ, 24 ಅಕ್ಟೋಬರ್ 2026

ಧರ್ಮಸ್ಥಳ: ಅಪ್ರಾಪ್ತ ಬಾಲಕಿ ಅತ್ಯಾಚಾರ ಪ್ರಕರಣ, ಆರೋಪಿ ಬಂಧನ

ಬೆಳ್ತಂಗಡಿ: ಅಪ್ರಾಪ್ತ ಬಾಲಕಿಯನ್ನು ಗರ್ಭಿಣಿಯಾಗಿಸಿ ಆಕೆ ಹೆಣ್ಣು ಮಗುವಿಗೆ ಜನ್ಮ ನೀಡಿದ ಪ್ರಕರಣಕ್ಕೆ ಕುರಿತಂತೆ ಆರೋಪಿಯನ್ನು ಧರ್ಮಸ್ಥಳ ಪೊಲೀಸರು ಬಂಧನ ಮಾಡಿದ್ದಾರೆ.

ಧರ್ಮಸ್ಥಳ ಠಾಣಾ ವ್ಯಾಪ್ತಿಯ 16 ವರ್ಷದ ಬಾಲಕಿಯೊಂದಿಗೆ ಕಳೆದ ವರ್ಷ ಸೆಪ್ಟೆಂಬರ್‌ನಿಂದ ನವೆಂಬರ್‌ ಅವಧಿಯಲ್ಲಿ ಆರೋಪಿ ಶ್ರೀಕಾಂತ್‌ (21) ಎಂಬಾತ ಬಲವಂತವಾಗಿ ಅತ್ಯಾಚಾರ ಮಾಡಿ, ಯಾರಿಗೂ ಹೇಳದಂತೆ ಬೆದರಿಕೆ ಒಡ್ಡಿದ್ದ ಎಂದು ಆರೋಪಿಸಲಾಗಿದೆ. ಭಯದಿಂದ ಬಾಲಕಿ ಯಾರಿಗೂ ತಿಳಿಸದೆ ಸುಮ್ಮನಿದ್ದಳು. ಬಳಿಕ ಗರ್ಭಿಣಿಯಾದ ಬಾಲಕಿ ಆ.22 ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ.

ಪ್ರಕರಣ ಸಂಬಂಧ ಆ.23 ರಂದು ಧರ್ಮಸ್ಥಳ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಾದ ನಂತರ ಆರೋಪಿ ಪರಾರಿಯಾಗಲು ಯತ್ನ ಮಾಡಿದ್ದ. ಬೆಂಗಳೂರಿನ ದೊಡ್ಡಬಳ್ಳಾಪುರದಿಂದ ತನ್ನ ಸ್ವಗ್ರಾಮದ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಹಿಂದೂಪುರಕ್ಕೆ ಪರಾರಿಯಾಗಲು ಯತ್ನ ಮಾಡುತ್ತಿದ್ದಾಗ, ಆ.25 ರಂದು ಸಂಜೆ ಪೊಲೀಸರು ಬೆಂಗಳೂರಿನ ದೊಡ್ಡಬಳ್ಳಾಪುರದಲ್ಲಿ ಮಿಂಚಿನ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧನ ಮಾಡಿದ್ದಾರೆ.

ಈತ ಆಂಧ್ರಪ್ರದೇಶ ಮೂಲದವನಾಗಿದ್ದು, ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದ. ಧರ್ಮಸ್ಥಳದ ಯುವತಿಯನ್ನು ಪರಿಚಯ ಮಾಡಿಕೊಂಡು ಅತ್ಯಾಚಾರ ನಡೆಸಿದ್ದ ಎಂದು ಆರೋಪಿಸಲಾಗಿದೆ.

ಬಂಧಿತ ಆರೋಪಿಯನ್ನು ಆ.26 ರಂದು ಮಂಗಳೂರಿನ ಪೋಕ್ಸೋ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.