ಶನಿವಾರ, 24 ಅಕ್ಟೋಬರ್ 2026

ಕಾರ್ಕಳ ಶ್ರೀ ಮಾರಿಯಮ್ಮ ದೇವಸ್ಥಾನದ ಆಡಳಿತ ಮೊಕ್ತೇಸರ ಗೋಪಾಲಕೃಷ್ಣ ರಾವ್ ನಿಧನ

ಕಾರ್ಕಳ: ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಕಾರ್ಕಳದ ಪ್ರಸಿದ್ಧ ಶ್ರೀ ಮಾರಿಯಮ್ಮ ದೇವಸ್ಥಾನದ ಆಡಳಿತ ಮೊಕ್ತೇಸರ ಗೋಪಾಲಕೃಷ್ಣ ರಾವ್ (91) ಅವರು ಆಗಸ್ಟ್ 27ರಂದು ನಿಧನರಾಗಿದ್ದಾರೆ.

ಸುದೀರ್ಘ ಕಾಲ ಶ್ರೀ ಮಾರಿಯಮ್ಮ ದೇವಸ್ಥಾನದ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ಗೋಪಾಲಕೃಷ್ಣ ರಾವ್ ಅವರು, ದೇವಸ್ಥಾನದ ಆಡಳಿತ ಹಾಗೂ ಅಭಿವೃದ್ಧಿ ಕಾರ್ಯಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಊರಿನ ಹಿರಿಯ ಮಾರ್ಗದರ್ಶಕರಾಗಿ ಅವರು ಎಲ್ಲರ ಪ್ರೀತಿ, ಗೌರವಕ್ಕೆ ಪಾತ್ರರಾಗಿದ್ದರು.

ದೇವಸ್ಥಾನದ ಅಭಿವೃದ್ಧಿಯಲ್ಲಿ ಮಹತ್ವದ ಸೇವೆ :

ಗೋಪಾಲಕೃಷ್ಣ ರಾವ್ ಅವರು ಹಲವು ವರ್ಷಗಳ ಕಾಲ ದೇವಸ್ಥಾನದ ಮುಖ್ಯ ಮೊಕ್ತೇಸರರಾಗಿ ಸೇವೆ ಸಲ್ಲಿಸಿದ್ದರು. ಅವರ ಮಾರ್ಗದರ್ಶನದಲ್ಲಿ ಶ್ರೀ ಮಾರಿಯಮ್ಮ ದೇವಸ್ಥಾನದ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವ ಸೇರಿದಂತೆ ಹಲವು ಧಾರ್ಮಿಕ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆದಿದ್ದವು. ಧಾರ್ಮಿಕ ಕಾರ್ಯಗಳಲ್ಲಷ್ಟೇ ಅಲ್ಲದೆ, ಸಮಾಜಮುಖಿ ಚಟುವಟಿಕೆಗಳಲ್ಲಿಯೂ ಅವರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಸರಳತೆ, ಸಜ್ಜನಿಕೆ ಹಾಗೂ ನೇರ ನಡೆ-ನುಡಿಗೆ ಹೆಸರಾಗಿದ್ದ ಅವರು, ಸ್ಥಳೀಯವಾಗಿ ಹಿರಿಯ ಮಾರ್ಗದರ್ಶಕರಾಗಿ ಗುರುತಿಸಿಕೊಂಡಿದ್ದರು.

ಗಣ್ಯರಿಂದ ಸಂತಾಪ

ಗೋಪಾಲಕೃಷ್ಣ ರಾವ್ ಅವರ ನಿಧನಕ್ಕೆ ಕಾಂಗ್ರೆಸ್ ನಾಯಕ ಉದಯ ಶೆಟ್ಟಿ ಮುನಿಯಾಲು ಸಂತಾಪ ಸೂಚಿಸಿದ್ದಾರೆ. ದೇವಸ್ಥಾನದ ಅಭಿವೃದ್ಧಿಗೆ ಅವರು ನೀಡಿದ ಕೊಡುಗೆ ಸ್ಮರಣೀಯವಾಗಿದ್ದು, ಅವರ ಅಗಲಿಕೆಯಿಂದ ಸಮಾಜವು ಒಬ್ಬ ಹಿರಿಯ ಧಾರ್ಮಿಕ ಮುಂದಾಳುವನ್ನು ಕಳೆದುಕೊಂಡಂತಾಗಿದೆ ಎಂದು ಅವರು ಸಂತಾಪದಲ್ಲಿ ತಿಳಿಸಿದ್ದಾರೆ.ಗೋಪಾಲಕೃಷ್ಣ ರಾವ್ ಅವರ ನಿಧನದಿಂದ ಕಾರ್ಕಳ ಹಾಗೂ ಸುತ್ತಮುತ್ತಲಿನ ಧಾರ್ಮಿಕ ವಲಯದಲ್ಲಿ ಶೋಕ ಆವರಿಸಿದೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಕುಟುಂಬಸ್ಥರು, ಬಂಧು-ಮಿತ್ರರಿಗೆ ದುಃಖ ಭರಿಸುವ ಶಕ್ತಿ ದೊರಕಲಿ ಎಂದು ಗಣ್ಯರು ಹಾಗೂ ಭಕ್ತರು ಪ್ರಾರ್ಥಿಸಿದ್ದಾರೆ.