ಶನಿವಾರ, 24 ಅಕ್ಟೋಬರ್ 2026

ಚರಂಡಿ ಕಾಮಗಾರಿ ವೇಳೆ 18 ವರ್ಷದ ಯುವಕನಿಗೆ ಸಿಕ್ತು 98 ಕೋಟಿ ರೂ. ಮೌಲ್ಯದ ನಿಧಿ!!

ಒಳಚರಂಡಿ ಕಾಮಗಾರಿ ವೇಳೆ 18 ವರ್ಷದ ಹುಡುಗನಿಗೆ 98 ಕೋಟಿ ರೂ. ಮೌಲ್ಯದ ನಿಧಿ ಸಿಕ್ಕಿರುವ ಅಚ್ಚರಿದಾಯಕ ಘಟನೆ ಬೆಲ್ಜಿಯಂನಲ್ಲಿ ನಡೆದಿದೆ.

ಕಳೆದ ಕೆಲ ದಿನಗಳ ಹಿಂದೆಯಷ್ಟೇ ಕರ್ನಾಟಕದ ಲಕ್ಕುಂಡಿಯಲ್ಲಿ ಚಿನ್ನದ ನಿಧಿ ಪತ್ತೆಯಾಗಿದ್ದು, ಇಡೀ ದೇಶಾದ್ಯಂತ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಇದೀಗ ಬೆಲ್ಜಿಯಂನಲ್ಲಿ ಚರಂಡಿ ಕಾಮಗಾರಿಯಲ್ಲಿ ತೊಡಗಿದ್ದ 18 ವರ್ಷದ ವಿದ್ಯಾರ್ಥಿ ಯುವಕನಿಗೆ ಬರೋಬ್ಬರಿ 99 ಕೋಟಿ ರೂಪಾಯಿ (ಅಂದಾಜು 9 ಮಿಲಿಯನ್ ಯುರೋ) ಮೌಲ್ಯದ ಅಪಾರ ಪ್ರಮಾಣದ ಚಿನ್ನದ ನಿಧಿ ಸಿಕ್ಕ ಅಪರೂಪದ ಘಟನೆ ನಡೆದಿದೆ.

ಯುರೋಪ್‌ನ ಬ್ರಸೆಲ್ಸ್‌ನ ವಾಯುವ್ಯ ದಿಕ್ಕಿನಲ್ಲಿರುವ ಸಿಂಟ್ ಗಿಲಿಸ್ ಡೆಂಡರ್ಮಾಂಡೆ ಎಂಬ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಬೇಸಿಗೆ ರಜೆ ಹಿನ್ನೆಲೆ ನಿರ್ಮಾಣ ಕಾಮಗಾರಿಯಲ್ಲಿ ದಿನಗೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಕೋಬೆ ಎಂಬ 18 ವರ್ಷದ ಯುವಕ ಮತ್ತು ಆತನ ಸಹೋದ್ಯೋಗಿಗಳು ಚರಂಡಿ ಪೈಪ್ ಬದಲಾಯಿಸುವ ಕೆಲಸದಲ್ಲಿ ನಿರತರಾಗಿದ್ದರು. ಈ ವೇಳೆ ಭೂಮಿಯ ಅಡಿಯಲ್ಲಿ ಹಳೆಯ ಕಟ್ಟಡವೊಂದರ ಇಟ್ಟಿಗೆಯ ಗೋಡೆಯ ಮರೆಯಲ್ಲಿ ಇಟ್ಟಿದ್ದ ಚೀಲವೊಂದು ಅವರ ಕಣ್ಣಿಗೆ ಬಿದ್ದಿದೆ. ಅದರೊಳಗೆ ಬೃಹತ್ ಪ್ರಮಾಣದ ಚಿನ್ನದ ಗಟ್ಟಿಗಳು ಮತ್ತು ಅಪರೂಪದ ನಾಣ್ಯಗಳನ್ನು ಪತ್ತೆಯಾಗಿವೆ. ಸುಮಾರು 9 ಮಿಲಿಯನ್ ಯುರೋಗಳಷ್ಟು (ಅಂದಾಜು 98 ಕೋಟಿ ರೂ.) ಸಿಕ್ಕಿದೆ.

ಚಿನ್ನದ ನಾಣ್ಯಗಳು, ಗಟ್ಟಿಗಳು ಮತ್ತು ಬೆಳ್ಳಿಯ ಬಾರ್‌ಗಳನ್ನು ಒಳಗೊಂಡಿದ್ದ ನಿಧಿ, 19 ನೇ ಶತಮಾನದ ಉತ್ತರಾರ್ಧದಲ್ಲಿ ಬ್ರೂವರಿ ಮಾಲೀಕ ಥಿಯೋಫಿಲಸ್ ವ್ಯಾನ್ ಆಶೆಗಾಗಿ ನಿರ್ಮಿಸಲಾದ ಭವ್ಯವಾದ ವಿಲ್ಲಾದ ಕೆಳಗೆ ಇಟ್ಟಿಗೆಗಳಿಂದ ಕೂಡಿದ ನೆಲಮಾಳಿಗೆಯಲ್ಲಿ ಮುಚ್ಚಿದ ಚೀಲದೊಳಗೆ ಮರೆಮಾಡಲಾಗಿತ್ತು. ಈ ಐತಿಹಾಸಿಕ ಕಟ್ಟಡವು 1899ರಲ್ಲಿ ಸ್ಥಾಪನೆಯಾಗಿದ್ದ ಮದ್ಯ ತಯಾರಿಕಾ ಘಟಕದ ಮಾಲೀಕರಾದ ‘ಥಿಯೋಫಿಲಸ್ ವ್ಯಾನ್ ಆಸ್ಚೆ’ ಅವರಿಗೆ ಸೇರಿದ್ದಾಗಿದೆ. ಈಗ ಈ ಕಟ್ಟಡವನ್ನು ಸಾಮಾಜಿಕ ಕಲ್ಯಾಣ ಸಂಸ್ಥೆಯೊಂದು ಹೊಸ ಕಚೇರಿ ಹಾಗೂ ವಸತಿ ಸಂಕೀರ್ಣವನ್ನಾಗಿ ಪರಿವರ್ತಿಸುವ ಕಾರ್ಯ ಮುಂದುವರೆದಿತ್ತು ಎಂದು ತಿಳಿದುಬಂದಿದೆ.

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ತ್ವರಿತವಾಗಿ ಸ್ಥಳವನ್ನು ವಶಪಡಿಸಿಕೊಂಡು, ನಿಧಿಯನ್ನು ಬ್ರಸೆಲ್ಸ್‌ನಲ್ಲಿರುವ ಸುರಕ್ಷಿತ ಸ್ಥಳಕ್ಕೆ ವರ್ಗಾಯಿಸಿದರು. ಕಾನೂನುಬದ್ಧ ಮಾಲೀಕತ್ವವನ್ನು ನಿರ್ಧರಿಸಲು ಅಧಿಕಾರಿಗಳು ಈಗ ಅದರ ಮೂಲವನ್ನು ಪರಿಶೀಲಿಸುತ್ತಿದ್ದಾರೆ.