ಶನಿವಾರ, 24 ಅಕ್ಟೋಬರ್ 2026

ಮಲ್ಪೆ: ಮೀನಿನ ಬಲೆ ಎಳೆಯುತ್ತಿರುವಾಗ ಸಮುದ್ರಕ್ಕೆ ಬಿದ್ದು ವ್ಯಕ್ತಿ ಸಾವು

ಮಲ್ಪೆ: ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಮೀನುಗಾರ ಕಾರ್ಮಿಕ ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದು ಮೃತಪಟ್ಟ ಘಟನೆ ಮಲ್ಪೆ ಬಂದರು ವ್ಯಾಪ್ತಿಯಲ್ಲಿ ನಡೆದಿದೆ.

ಭದ್ರಾವತಿ ತಾಲೂಕಿನ ಬೆಳ್ಳಿಗೇರಿ ಗ್ರಾಮದ ಸಂಜೀವ (33) ಅವರು ಸಾವಿಗೀಡಾಗಿದ್ದು, ಮಲ್ಪೆಯ ರಜತ ಎಂಬ ಹೆಸರಿನ ಬೋಟಿನಲ್ಲಿ ಕೆಲಸ ಮಾಡಿಕೊಂಡಿದ್ದರು. ಆ.10 ರಂದು ಬೋಟಿನಲ್ಲಿ ತೆರಳಿದ್ದು ಆ.14 ರ ಮಧ್ಯಾಹ್ನ 1.30 ರ ವೇಳೆಗೆ ಮೀನಿಗೆ ಇರಿಸಿದ ಬಲೆಯನ್ನು ಮೇಲಕ್ಕೆ ಎಳೆಯುತ್ತಿರುವಾಗ ಅಬ್ಬರದ ಅಲೆ ಉಂಟಾಗಿ ಬೋಟು ಅಲುಗಾಡಿದ್ದು, ಈ ಸಂದರ್ಭದಲ್ಲಿ ಸಂಜೀವ ಅವರು ಕಾಲುಜಾರಿ ನೀರಿಗೆ ಬಿದ್ದು ಕಣ್ಮರೆಯಾಗಿದ್ದರು.

ನಂತರ ಟ್ರಾಲ್‌ ಹಾಕಿ ಹುಡುಕಾಟ ನಡೆಸಿದ್ದು, ಸಂಜೆ ವೇಳೆಗೆ ಸಂಜೀವ ಅವರನ್ನು ಪತ್ತೆ ಮಾಡಲಾಗಿದೆ. ಕೂಡಲೇ ಅವರನ್ನು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಬಂದಿದ್ದು, ಪರೀಕ್ಷೆ ಮಾಡಿದ ವೈದ್ಯರು ಅವರು ಅದಾಗಲೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.