ಫಿಫಾ ವಿಶ್ವಕಪ್ 2026ರ (FIFA World Cup 2026) ಉದ್ಘಾಟನಾ ಸಮಾರಂಭದಲ್ಲಿ ನೋರಾ ಫತೇಹಿ ನೀಡಿದ ಅದ್ಭುತ ಪ್ರದರ್ಶನದ ಬಳಿಕ ವಿಶ್ವದಾದ್ಯಂತ ಆಕೆಯ ಜನಪ್ರಿಯತೆ ಮತ್ತಷ್ಟು ಹೆಚ್ಚಾಗಿದ್ದು, ಗೂಗಲ್ ಟ್ರೆಂಡ್ಸ್ ಅಂಕಿ-ಅಂಶಗಳ ಪ್ರಕಾರ, ಕಳೆದ ಕೆಲವು ದಿನಗಳಲ್ಲಿ ನೋರಾ ಫತೇಹಿ ವಿಶ್ವದಾದ್ಯಂತ ಅತಿ ಹೆಚ್ಚು ಹುಡುಕಲ್ಪಟ್ಟ ಬಾಲಿವುಡ್ ಕಲಾವಿದೆಯಾಗಿ ಹೊರಹೊಮ್ಮಿದ್ದಾರೆ.

ಬಾಲಿವುಡ್ ಅಂಗಳದಲ್ಲಿ ಗ್ಲಾಮರ್ ಗೊಂಬೆಗಳಿಗೇನೂ ಕೊರತೆಯಿಲ್ಲ. ತಮ್ಮ ಅಂದ ಚಂದದ ದೇಹ ಪ್ರದರ್ಶಿಸುತ್ತಾ, ಬಳಕುತ್ತಾ, ತಳುಕುತ್ತಾ ಇಡೀ ದೇಶದ ಜನರನ್ನೇ ಮೈಮರೆಸುವಂತಹ ಮೈಮಾಟದವರು ಅನೇಕರಿದ್ದಾರೆ. ಆದರೆ, ಇಡೀ ಜಗತ್ತನ್ನೇ ತನ್ನ ಸೊಂಟದ ಬಳುಕುವಿಕೆಯಿಂದ ಮತ್ತು ಕಣ್ಣೋಟದಿಂದ ಮಂತ್ರಮುಗ್ಧರನ್ನಾಗಿಸುವ ತಾಕತ್ತು ಇರುವುದು ಕೇವಲ ಒಬ್ಬಳಿಗೆ… ಅವಳೇ ‘ದಿಲ್ಬರ್’ ಗರ್ಲ್ ನೋರಾ ಫತೇಹಿ! ಈಗ ನೋರಾ ಫತೇಹಿ (Nora Fatehi) ಹೆಸರು ಇಡೀ ವಿಶ್ವದಾದ್ಯಂತ ಮಾರ್ಧನಿಸುತ್ತಿದೆ. ಯಾಕೆ ಗೊತ್ತಾ? ಇತ್ತೀಚಿನ ಗೂಗಲ್ ಟ್ರೆಂಡ್ಸ್ ಪ್ರಕಾರ, ಜಾಗತಿಕವಾಗಿ ಅತಿ ಹೆಚ್ಚು ಹುಡುಕಲ್ಪಟ್ಟ ಬಾಲಿವುಡ್ ಕಲಾವಿದೆ ಎಂಬ ಕಿರೀಟ ಈಗ ನೋರಾ ಮುಡಿಗೇರಿದೆ! ಈ ಮೂಲಕ ಅವರು ಪ್ರಿಯಾಂಕಾ ಚೋಪ್ರಾ, ಆಲಿಯಾ ಭಟ್ ಹಾಗೂ ದೀಪಿಕಾ ಪಡುಕೋಣೆ ಅವರಂತಹ ಪ್ರಮುಖ ಬಾಲಿವುಡ್ ತಾರೆಯರಿಗಿಂತಲೂ ಹೆಚ್ಚು ಗಮನ ಸೆಳೆದಿದ್ದಾರೆ ಎಂದು ವರದಿಗಳು ತಿಳಿಸಿವೆ.
ಅಂದಹಾಗೆ ಜೂನ್ 12ರಂದು ಕೆನಡಾದ ಟೊರಾಂಟೊದಲ್ಲಿ ನಡೆದ ಫಿಫಾ ವಿಶ್ವಕಪ್ 2026ರ ಉದ್ಘಾಟನಾ ಸಮಾರಂಭದಲ್ಲಿ ನೋರಾ ಫತೇಹಿ ಪ್ರಮುಖ ಆಕರ್ಷಣೆಯಾಗಿದ್ದರು. ತಮ್ಮ ಉತ್ಸಾಹಭರಿತ ನೃತ್ಯ, ಸ್ಟೇಜ್ ಪ್ರೆಸೆನ್ಸ್ ಮತ್ತು ನೃತ್ಯ ಪ್ರದರ್ಶನದ ಮೂಲಕ ಲಕ್ಷಾಂತರ ಕ್ರೀಡಾಭಿಮಾನಿಗಳ ಮೆಚ್ಚುಗೆ ಗಳಿಸಿದರು. ಕಾರ್ಯಕ್ರಮ ಮುಗಿದ ಕೆಲವೇ ಗಂಟೆಗಳಲ್ಲಿ ನೋರಾ ಅವರ ಪ್ರದರ್ಶನದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗತೊಡಗಿದವು. ವಿಶ್ವದ ವಿವಿಧ ದೇಶಗಳ ಪ್ರೇಕ್ಷಕರು ಅವರ ಪ್ರದರ್ಶನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಇದೇ ಕಾರಣದಿಂದ ಗೂಗಲ್ನಲ್ಲಿ ಅವರ ಹೆಸರಿನ ಹುಡುಕಾಟವು ಗಮನಾರ್ಹವಾಗಿ ಹೆಚ್ಚಾಗಿದೆ.
ನೋರಾ ಫತೇಹಿ ಅವರ ಜನಪ್ರಿಯತೆ ಕೇವಲ ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ. ಮಧ್ಯಪ್ರಾಚ್ಯ, ಯುರೋಪ್, ಉತ್ತರ ಅಮೆರಿಕ ಸೇರಿದಂತೆ ಹಲವು ಪ್ರದೇಶಗಳಲ್ಲಿ ಅವರಿಗೆ ದೊಡ್ಡ ಅಭಿಮಾನಿ ಬಳಗವಿದೆ. ಹಾಗೆಯೇ ಫಿಫಾ ವಿಶ್ವಕಪ್ನಂತಹ ವಿಶ್ವದ ಅತಿದೊಡ್ಡ ಕ್ರೀಡಾ ಉತ್ಸವದಲ್ಲಿ ಪಾಲ್ಗೊಳ್ಳುವುದು ಅವರ ಅಂತಾರಾಷ್ಟ್ರೀಯ ವೃತ್ತಿಜೀವನಕ್ಕೆ ಮತ್ತೊಂದು ದೊಡ್ಡ ಮೈಲಿಗಲ್ಲಾಗಿದೆ. ಒಂದು ಕಾಲದಲ್ಲಿ ಬಾಲಿವುಡ್ನ ವಿಶೇಷ ನೃತ್ಯಗೀತೆಗಳ ಮೂಲಕ ಗುರುತಿಸಿಕೊಂಡಿದ್ದ ನೋರಾ ಫತೇಹಿ, ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವ ಕಲಾವಿದೆಯಾಗಿ ಬೆಳೆದಿದ್ದಾರೆ.
ಇನ್ನೂ ನೋರಾ ಫತೇಹಿ ಅವರ ಯಶಸ್ಸು ಕೇವಲ ಡ್ಯಾನ್ಸ್ಗೆ ಸೀಮಿತವಾಗಿಲ್ಲ. ಅಂತರಾಷ್ಟ್ರೀಯ ಮಟ್ಟದಲ್ಲಿ ಅವರ ಬ್ರ್ಯಾಂಡ್ ಮೌಲ್ಯ ಎಷ್ಟಿದೆ ಎಂದರೆ, ವಿಶ್ವದ ಅತ್ಯಂತ ಐಷಾರಾಮಿ ವಾಚ್ ತಯಾರಿಕಾ ಸಂಸ್ಥೆ ‘ಜಾಕೋಬ್ ಅಂಡ್ ಕಂಪನಿ’ (Jacob & Co) ಅವರಿಗೆ ವಿಶೇಷವಾದ, ಇನ್ನೂ ಮಾರುಕಟ್ಟೆಗೆ ಬಿಡುಗಡೆಯಾಗದ ಎಕ್ಸ್ಕ್ಲೂಸಿವ್ ವಾಚ್ ಒಂದನ್ನು ಉಡುಗೊರೆಯಾಗಿ ನೀಡಿದೆ. ಈ ಗೌರವ ಪಡೆದ ವಿಶ್ವದ ಕೆಲವೇ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ನೋರಾ ಹೆಸರೂ ಸೇರಿದೆ. ಅಂದಹಾಗೆ, ಈ ಲಿಸ್ಟ್ನಲ್ಲಿ ಲಿಯೋನೆಲ್ ಮೆಸ್ಸಿ, ಕ್ರಿಸ್ಟಿಯಾನೊ ರೊನಾಲ್ಡೊ, ರಿಹಾನ್ನಾ ಮತ್ತು ಸಲ್ಮಾನ್ ಖಾನ್ ಅಂತಹ ದಿಗ್ಗಜರಿದ್ದಾರೆ ಎಂದರೆ ನೀವು ನಂಬಲೇಬೇಕು!

