ಉಡುಪಿ: ದೇವಸ್ಥಾನದಲ್ಲಿ ತೀರ್ಥ ಪ್ರಸಾದ ಸ್ವೀಕರಿಸುವಾಗಲೇ ಚಿನ್ನದ ಸರ ಕಳವು
ಉಡುಪಿ, ಸೆ.15: ಚೌತಿ ಹಬ್ಬದ ಪ್ರಯುಕ್ತ ದೇವಸ್ಥಾನಗಳಿಗೆ ಭೇಟಿ ನೀಡಿರುವ ವೃದ್ಧ ಭಕ್ತೆಯೊಬ್ಬರ ಚಿನ್ನದ ಸರ ಕಳವು ಮಾಡಿರುವ ಘಟನೆ ವರದಿಯಾಗಿದೆ. ಕುಂಭಾಶಿಯ ಶ್ರೀ ಆನೆಗುಡ್ಡೆ ವಿನಾಯಕ ದೇವಸ್ಥಾನ ಹಾಗೂ ಕೋಟ ಶ್ರೀ ಅಮೃತೇಶ್ವರಿ ದೇವಸ್ಥಾನದಲ್ಲಿ ಪ್ರತ್ಯೇಕ ಪ್ರಕರಣಗಳು ನಡೆದಿದೆ. ಒಟ್ಟು ರೂ.5.50 ಲಕ್ಷ ಮೌಲ್ಯದ ಚಿನ್ನಾಭರಣ ಕಳುವಾಗಿದೆ.
Sponsoredಕುಂಭಾಶಿ ಶ್ರೀ ಆನೆಗುಡ್ಡೆ ವಿನಾಯಕ ದೇವಸ್ಥಾನಕ್ಕೆ ಕುಟುಂಬದವರ ಜೊತೆ ಬಂದಿದ್ದ ಬೈಂದೂರು ತಾಲೂಕಿನ ನಾಡ ಗ್ರಾಮದ ನಿವಾಸಿ ಮುತ್ತು (75) ಎಂಬುವವರ ಕುತ್ತಿಗೆಯಿಂದ ಸುಮಾರು ರೂ.2.50 ಲಕ್ಷ ಮೌಲ್ಯದ ಚಿನ್ನದ ಸರವನ್ನು ಎರಡು ಮೂರು ಅಪರಿಚಿತ ಮಹಿಳೆಯರ ತಂಡ ಕಳವು ಮಾಡಿದೆ.
ಸೆ.14 ರಂದು ಬೆಳಗ್ಗೆ ಸುಮಾರು 10.30 ಕ್ಕೆ ದೇವಸ್ಥಾನಕ್ಕೆ ಬಂದಿದ್ದ ಅವರು ದೇವರ ದರ್ಶನ ಪಡೆದು ತೀರ್ಥ ಪ್ರಸಾದ ಸ್ವೀಕರಿಸಿ ಪ್ರದಕ್ಷಿಣೆ ಹಾಕುತ್ತಿರುವಾಗ ಈ ಕಳವು ನಡೆದಿದೆ ಎಂದು ವರದಿಯಾಗಿದೆ.
ಕುಂದಾಪುರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ. ತಮಿಳುನಾಡು ಮೂಲದ ಅತರರಾಜ್ಯ ಕಳ್ಳರ ತಂಡದ ಕೈವಾಡವಿದೆಯೇ ಎನ್ನುವ ಕುರಿತು ತನಿಖೆ ನಡೆಸುತ್ತಿದ್ದಾರೆ.
ಅದೇ ದಿನ ಕೋಟ ಶ್ರೀ ಅಮೃತೇಶ್ವರಿ ದೇವಸ್ಥಾನದಲ್ಲಿಯೂ 72 ವರ್ಷದ ವೃದ್ಧೆಯೊಬ್ಬರ ಕುತ್ತಿಗೆಯಿಂದ ಸುಮಾರು ರೂ.3 ಲಕ್ಷ ಮೌಲ್ಯದ ಚಿನ್ನದ ಕರಿಮಣಿ ಸರ ಕಳವು ಮಾಡಲಾಗಿದೆ. ಬೇಬಿ ಶೆಡ್ತಿ (72) ಎಂಬುವವರ ಚಿನ್ನ ಕಳುವಾಗಿದೆ. ಪೂಜೆ ಮುಗಿಸಿ ಸುಮಾರು 12.30 ಕ್ಕೆ ದೇವಸ್ಥಾನದ ಹೊರಾಂಗಣಕ್ಕೆ ಬಂದಾಗ ಕುತ್ತಿಗೆಯಲ್ಲಿದ್ದ ಚಿನ್ನದ ಕರಿಮಣಿ ಸರ ನಾಪತ್ತೆಯಾಗಿರುವುದು ತಿಳಿದು ಬಂದಿದೆ.
ಸುಮಾರು 24 ಗ್ರಾಂ ತೂಕದ ಮೂರು ಲಕ್ಷ ಮೌಲ್ಯದ ಚಿನ್ನದ ಕರಿಮಣಿ ಸರವನ್ನು ಜನಸಂದಣಿಯ ನಡುವೆ ಅಪರಿಚಿತರು ಎಳೆದುಕೊಂಡು ಪರಾರಿಯಾಗಿರುವ ಶಂಕೆ ಇದೆ. ಈ ಕುರಿತು ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



