ಶನಿವಾರ, 24 ಅಕ್ಟೋಬರ್ 2026

11 ತಿಂಗಳ ಮಗು ದಿಢೀರ್‌ ಸಾವು- ಅವಧಿ ಮುಗಿದ ಔಷಧಿ ನೀಡಿದ ಆರೋಪ

ದಾವಣಗೆರೆ: ಹೊನ್ನಾಳಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಮಗುವಿಗೆ ಅವಧಿ ಮುಗಿದ ಔಷಧಿ ನೀಡಿದ ಪರಿಣಾಮ ಮಗು ಸಾವಿಗೀಡಾದ ಆರೋಪ ಕೇಳಿಬಂದಿದೆ.

ಹೊನ್ನಾಳಿ ತಾಲೂಕಿನ ಹನುಮನಹಳ್ಳಿ ಗ್ರಾಮದಲ್ಲಿ ಮಗು ಸಾವಿಗೀಡಾಗಿದೆ. ಗ್ರಾಮದ ವಸುಂಧರ ಹಾಗೂ ಲೋಕೇಶ್‌ ದಂಪತಿಯ 11 ತಿಂಗಳ ಪುತ್ರಿ ಪೂರ್ವಿಕ ಸಾವಿಗೀಡಾದ ಬಾಲಕಿ. ಅನಾರೋಗ್ಯದ ಕಾರಣ ಸಾಸ್ವೆಹಳ್ಳಿ ಖಾಸಗಿ ಆಸ್ಪತ್ರೆಯಲ್ಲಿ ಮಗುವನ್ನು ಚಿಕಿತ್ಸೆಗೆ ದಾಖಲು ಮಾಡಿದ್ದು, ವೈದ್ಯರು ಕೊಟ್ಟ ಔಷಧಿ ಹಾಕಿದ ತಕ್ಷಣ ಮಗುವಿನ ಆರೋಗ್ಯದಲ್ಲಿ ಏರುಪೇರಾಗಿರುವುದಾಗಿ ವರದಿಯಾಗಿದೆ.

ಔಷಧಿ ಹಾಕಿದ ಕೆಲವೇ ಕ್ಷಣದಲ್ಲಿ ಮಗು ಸಾವಿಗೀಡಾಗಿದೆ ಎಂದು ಪೋಷಕರು ಆಕ್ರೋಶ ಹೊರ ಹಾಕಿದ್ದಾರೆ. ಹೊನ್ನಾಳಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.