ಪ್ರಿಯಕರನೊಂದಿಗೆ ಮೊಬೈಲ್ನಲ್ಲಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ಮಗುವಿನ ಅಳು ತೊಂದರೆ ಉಂಟು ಮಾಡಿತ್ತೆಂದು ತಾಯಿ ತನ್ನ ಮೂರು ವರ್ಷದ ಮಗನ ಕುತ್ತಿಗೆ ಹಿಸುಕಿ ಕೊಂದಿರುವ ಆರೋಪ ಕೇಳಿ ಬಂದಿದೆ. ಘಟನೆ ನಡೆದು ಒಂದು ತಿಂಗಳ ಬಳಿಕ ಮಹಿಳೆ ತನ್ನ ಪತಿಯಲ್ಲಿ ಸತ್ಯ ಒಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ವರದಿ ಪ್ರಕಾರ, ಜುಲೈ 27 ರಂದು ಸಂಜೆ 7.30 ರ ಸುಮಾರಿಗೆ ಗೋವಿಂದ್ ಗುಪ್ತಾ ಎಂಬುವವರು ಕರೆ ಮಾಡಿ, ಸಹೋದರನ ಪತ್ನಿ ಮೂರು ವರ್ಷದ ಮಗುವನ್ನು ಕುತ್ತಿಗೆ ಹಿಸುಕಿ ಕೊಂದಿರುವುದಾಗಿ ಮಾಹಿತಿ ನೀಡಿದರು.
ಮಗು ಆಟವಾಡುತ್ತಾ ಗದ್ದಲ ಮಾಡುತ್ತಿದ್ದ ಸಂದರ್ಭದಲ್ಲಿ ತಾಯಿ ರೂಚಿ ಗುಪ್ತಾ ಆತನನ್ನು ಗದರಿಸಿದ್ದು, ಈ ವೇಳೆ ಮಗುವಿಗೆ ಹಲ್ಲೆ ನಡೆಸಿ ಕುತ್ತಿಗೆ ಒತ್ತಿದ ಪರಿಣಾಮ ಮಗು ಸಾವಿಗೀಡಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಮಗು ಎಚ್ಚರವಾಗುತ್ತಿಲ್ಲ ಮಲಗಿರುವಂತೆ ಕಾಣುತ್ತಿದೆ ಎಂದು ಪತಿಗೆ ತಿಳಿಸಿದ್ದಾಳೆ. ಕೂಡಲೇ ಮಗುವನ್ನು ಪತಿ ಆಸ್ಪತ್ರೆಗೆ ಕರೆದೊಯ್ದರೂ ವೈದ್ಯರು ಮಗು ಮೃತಪಟ್ಟಿರುವುದಾಗಿ ಘೋಷಿಸಿದರು. ಮಗುವಿನ ಅಂತ್ಯಕ್ರಿಯೆಯನ್ನೂ ಮನೆ ಮಂದಿ ಮಾಡಿದ್ದಾರೆ.
ಘಟನೆ ನಡೆದ ಒಂದು ತಿಂಗಳ ಬಳಿಕ ರೂಚಿ ಗುಪ್ತಾ, ಮಗುವಿನ ಕುತ್ತಿಗೆ ಒತ್ತಿದ ಕಾರಣ ಅದು ಮೃತಪಟ್ಟಿತ್ತು ಎಂದು ಪತಿ ಬಳಿ ಹೇಳಿದ್ದಾಳೆ. ನಂತರ ಮನೆ ಮಂದಿ ಪೊಲೀಸ್ ಠಾಣೆಯಲ್ಲಿ ಲಿಖಿತ ದೂರು ದಾಖಲಿಸಿದ್ದಾರೆ.



