ಪುತ್ತೂರು: ಇಎಂಐ ಹಣ ಕೇಳಲು ಹೋದ ಫೈನಾನ್ಸ್ ಸಿಬ್ಬಂದಿ ಮೇಲೆ ಹಲ್ಲೆ
ಉಪ್ಪಿನಂಗಡಿ: ಬಾಕಿ ಉಳಿದಿದ್ದ ಮೊಬೈಲ್ ಇಎಂಐ ಹಣ ಕೇಳಲು ಮನೆಗೆ ಹೋಗಿದ್ದ ಬಜಾಜ್ ಫೈನಾನ್ಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆದ ಘಟನೆ ಪುತ್ತೂರು ತಾಲೂಕಿನ ಬಜತ್ತೂರು ಗ್ರಾಮದ ಬೆದ್ರೋಡಿಯಲ್ಲಿ ಅ.30 ರಂದು ನಡೆದಿದೆ.
Sponsoredಪುತ್ತೂರು ತಾಲೂಕಿನ ಕಬಕ ಗ್ರಾಮದ ಕೊಡಿಪ್ಪಾಡಿ ಮನೆ ನಿವಾಸಿ ಆದಿತ್ಯ ಜಿ (22) ನೀಡಿದ ದೂರಿನಂತೆ, ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆದಿತ್ಯ ಮತ್ತು ಅವರ ಸಹೋದ್ಯೋಗಿ ಸುರಕ್ಷ್ ಅವರು ಪುತ್ತೂರಿನ ಬಜಾಜ್ ಫೈನಾನ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಬೆದ್ರೋಡಿಯ ಹನ್ನತ್ ಬೀಬಿ ಅವರು ಕಂಪನಿಯ ಮೂಲಕ ಇಎಂಐನಲ್ಲಿ ಮೊಬೈಲ್ ಖರೀದಿಸಿದ್ದರು. ಆದರೆ ಇಎಂಐ ಹಣ ಬಾಕಿ ಉಳಿದಿತ್ತು ಎನ್ನಲಾಗಿದೆ.
ಅ.30 ರಂದು ಹನ್ನತ್ ಬೀಬಿ ಅವರು ಫೋನ್ ಮಾಡಿ ಮನೆಗೆ ಬಂದರೆ ಹಣ ಕೊಡುವುದಾಗಿ ತಿಳಿಸಿದ ಕಾರಣ ಸಂಜೆ 4 ಗಂಟೆಗೆ ಆದಿತ್ಯ ಮತ್ತು ಸುರಕ್ಷ್ ಮನೆಗೆ ತೆರಳಿದ್ದರು. ಈ ವೇಳೆ ಹನ್ನತ್ ಬೀಬಿ ಅವರ ಸಹೋದರ ಶಮೀರ್ ಏಕಾಏಕಿ ಸುರಕ್ಷ್ ಮೇಲೆ ಹಲ್ಲೆ ಮಾಡಿ, ನಿಂದನೆ ಮಾಡಿ, ಜೀವ ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಸುರಕ್ಷ್ ಅವರ ಬಲಕಾಲು, ಕೈ ಹಾಗೂ ಕೆನ್ನೆಗೆ ಗಾಯವಾಗಿದೆ. ಮನೆ ಮಂದಿ ಗಲಾಟೆ ಬಿಡಿಸಿದ್ದು, ಗಾಯಗೊಂಡ ಸುರಕ್ಷ್ ಅವರನ್ನು ಪುತ್ತೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಈ ಕುರಿತು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ವಿವಿಧ ಕಲಂಗಳಡಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.



