ಮಂಗಳವಾರ, 27 ಅಕ್ಟೋಬರ್ 2026
Trending

ಮಂಗಳೂರು; ನೇಪಾಳ ಮೂಲದ ಕುಖ್ಯಾತ ಮನೆಗಳ್ಳರ ಬಂಧನ

ಮಂಗಳೂರು ಜು.17: ಮಂಗಳೂರಿನ ಬರ್ಕೆ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದ ಮನೆ ಕಳ್ಳತನ ಪ್ರಕರಣವನ್ನು ಕೇವಲ ಐದು ದಿನಗಳಲ್ಲಿ ಭೇದಿಸಿರುವ ಪೊಲೀಸರು, ನೇಪಾಳ ಮೂಲದ ಮೂವರು ಕುಖ್ಯಾತ ಮನೆಗಳ್ಳರನ್ನು ಬಂಧಿಸಿ ಸುಮಾರು ರೂ.10 ಲಕ್ಷ ಮೌಲ್ಯದ ಚಿನ್ನ ಹಾಗೂ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

Sponsored

ಜುಲೈ 11 ರಂದು ಉರ್ವ ಮಾರ್ಕೆಟ್‌ ಸಮೀಪದ ಮಠದಕಣಿಯ ನಿವಾಸಿಗಳು ಮನೆಗೆ ಬೀಗ ಹಾಕಿ ಸಂಬಂಧಿಕರ ಮನೆಗೆ ಹೋಗಿದ್ದು, ಮರುದಿನ ಬೆಳಗ್ಗೆ ಮನೆಗೆ ಹಿಂದಿರುವಾಗ ಹಿಂಬಾಗಿಲು ಒಡೆದು ಸುಮಾರು 64 ಗ್ರಾಂ ಚಿನ್ನಾಭರಣ ಹಾಗೂ ರೂ.25000 ನಗದು ಸೇರಿ ಒಟ್ಟು ರೂ.8.57 ಲಕ್ಷ ಮೌಲ್ಯದ ವಸ್ತುಗಳನ್ನು ಕಳವು ಮಾಡಿರುವುದು ಬೆಳಕಿಗೆ ಬಂದಿತ್ತು.

Advertisement
Advertisement

ಈ ಕುರಿತು ಬರ್ಕೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ಐದು ದಿನಗಳಲ್ಲೇ ಜು.17 ರ ಮುಂಜಾನೆ ಬೋಳೂರಿನಲ್ಲಿ ಕಾರ್ಯಾಚರಣೆ ಮಾಡಿದ ಬರ್ಕೆ ಠಾಣೆ ಪೊಲೀಸರು ನೇಪಾಳ ಮೂಲದ ಮೂವರು ಆರೋಪಿಗಳನ್ನು ಬಂಧಿಸಿ ವಿಚಾರಣೆ ಮಾಡಿದಾಗ ಪ್ರಕರಣಕ್ಕೆ ಸಂಬಂಧಪಟ್ಟ ಎಲ್ಲಾ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

ಅಲ್ಲದೇ ಮಹಾರಾಷ್ಟ್ರದ ನಾಸಿಕ್‌ನಲ್ಲಿ ಕಳವು ಮಾಡಿದ್ದ 790 ಗ್ರಾಂ ಬೆಳ್ಳಿ ಆಭರಣಗಳನ್ನೂ ಪತ್ತೆ ಮಾಡಲಾಗಿದ್ದು, ಒಟ್ಟು ಸುಮಾರು ರೂ.10 ಲಕ್ಷ ಮೌಲ್ಯದ ಸೊತ್ತುಗಳನ್ನು ಜಪ್ತಿ ಮಾಡಲಾಗಿದೆ.

ಈ ವರ್ಷದ ಮಾರ್ಚ್‌ನಲ್ಲಿ ಉರ್ವ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದ ಮನೆ ಕಳ್ಳತನದ ಯತ್ನ ಪ್ರಕರಣದಲ್ಲಿಯೂ ಭಾಗಿಯಾಗಿರುವುದನ್ನು ಬಂಧಿತರು ಒಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಆರೋಪಿಗಳು ಬೆಂಗಳೂರು, ದಾವಣಗೆರೆ, ಉಡುಪಿ ಸೇರಿದಂತೆ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ 15 ಕ್ಕೂ ಹೆಚ್ಚು ಮನೆ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ. ತಮಿಳುನಾಡು, ದೆಹಲಿ ಹಾಗೂ ಹರಿಯಾಣ ರಾಜ್ಯಗಳಲ್ಲಿಯೂ ಇವರ ವಿರುದ್ಧ ಪ್ರಕರಣಗಳಿರುವ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತಿದ್ದು, ತನಿಖೆ ಮುಂದುವರಿದಿದೆ.

ತಿಲಕ್‌ ಕುಮಾರ್‌ ಖಡ್ಕ (36), ಅಶೋಕ್‌ ರಾಜ್‌ @ ಅಶೋಕ್‌ ಸಿಂಗ್‌ @ ಅಶೋಕ್‌ ಸಿಂಗ್‌ ಠಾಕುರಿ (33), ದಿಪೆಂದರ್‌ ರಸೈಲಿ (25) ಬಂಧಿತರು.

ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಮಂಗಳೂರು ನಗರ ಪೊಲೀಸ್‌ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement