ಸೋಮವಾರ, 26 ಅಕ್ಟೋಬರ್ 2026
Trending

ಚೀನಾ ಲಿಂಕ್‌ ಹೊಂದಿರುವ ಮಂಗಳೂರಿನ ಸೈಬರ್‌ ವಂಚಕರು ಅರೆಸ್ಟ್‌

Image Credit: Tv9 Kannada

ಬೆಂಗಳೂರು: ಮ್ಯೂಲ್‌ ಅಕೌಂಟ್‌ಗಳ ವಿರುದ್ಧದ ಕಾರ್ಯಾಚರಣೆ ಸಂದರ್ಭ ಚೀನಾ ಲಿಂಕ್‌ ಹೊಂದಿರುವ ಮಂಗಳೂರಿನ ಸೈಬರ್‌ ವಂಚಕರಿಬ್ಬರನ್ನು ರಾಜ್ಯ ಸೈಬರ್‌ ಕಮಾಂಡ್‌ ಯೂನಿಟ್‌ ಬಂಧನ ಮಾಡಿದೆ. ಮಂಗಳೂರು ಮೂಲದ ಮೊಹಮ್ಮದ್‌ ಅನೀಸ್‌ ಮತ್ತು ಸಲೀತ್‌ ಅಹ್ಮದ್‌ರನ್ನು ಬಂಧನ ಮಾಡಲಾಗಿದೆ. ಡಿಜಿಪಿ ಪ್ರಣವ್‌ ಮೊಹಂತಿ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ.

Sponsored

ಬಂಧಿತ ವಂಚಕರು ಟ್ರೇಡಿಂಗ್‌ ಬಿಸಿನೆಸ್‌ ಹೆಸರಿನಲ್ಲಿ ಬ್ಯಾಂಕ್‌ ಖಾತೆಗಳ ಮಾಹಿತಿಯನ್ನು ಪಡೆದು, ಸೈಬರ್‌ ವಂಚನೆಗೆ ಬ್ಯಾಂಕ್‌ ಖಾತೆಗಳ ವಿವರ ಬಳಕೆ ಮಾಡುತ್ತಿದ್ದರು. ಆರೋಪಿಗಳಿಂದ ಪೊಲೀಸರು 4 ಮೊಬೈಲ್‌ ಫೋನ್‌ಗಳು, 18 ಬಿಟ್‌ ಕಾರ್ಡ್‌ಗಳು, 17 ಬ್ಯಾಂಕ್‌ ಪಾಸ್‌ಬುಕ್‌ಗಳು, 6 ಚೆಕ್‌ ಪುಸ್ತಕಗಳು, 1,479.31 USDT (ಕ್ರಿಪ್ಟೋಕರೆನ್ಸಿ) 1 ಕಾರನ್ನು ವಶಕ್ಕೆ ಪಡೆಯಲಾಗಿದೆ.

ಮ್ಯೂಲ್‌ ಖಾತೆಗಳನ್ನು ಬಳಸಿ, ಕಡಿಮೆ ಬೆಲೆಗೆ ಕ್ರಿಪ್ಟೋ ಖರೀದಿ ಮಾಡಿ ಚೀನಾ ವಂಚಕರಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಆರೋಪ ಇವರ ಮೇಲಿದೆ.

70ಕ್ಕೂ ಹೆಚ್ಚು ಬ್ಯಾಂಕ್‌ ಖಾತೆಗಳನ್ನು ಸಂಗ್ರಹ ಮಾಡಿ ಚೀನಾದವರಿಗೆ ನೀಡಲಾಗಿತ್ತು. ಚೀನಾದ ಸೈಬರ್‌ ವಂಚಕರು ಆ ಬ್ಯಾಂಕ್‌ ಖಾತೆಗಳಿಗೆ ಹಣ ವರ್ಗಾವಣೆ ಮಾಡುತ್ತಿದ್ದು. ಚೀನಾದವರ ಸೈಬರ್‌ ವಂಚನೆ ಕುರಿತು ಆರೋಪಿಗಳಿಗೆ ತಿಳಿದಿದ್ದರೂ ಕೂಡಾ, ಹಣದ ಆಸೆಗೆ ಆರೋಪಿಗಳು ಚೀನಾದವರಿಗೆ ಸಾಥ್‌ ನೀಡಿರುವ ಕುರಿತು ವರದಿಯಾಗಿದೆ.

ಉಳಿದ ಹಾಗೆ ಈ ಪ್ರಕರಣಕ್ಕೆ ಬಳಸಲಾಗಿದ್ದ 37 ಬ್ಯಾಂಕ್‌ ಖಾತೆಗಳ ವಿರುದ್ಧ ದೇಶದಾದ್ಯಂತ 88 ಕ್ಕೂ ಹೆಚ್ಚು ದೂರು ದಾಖಲಾಗಿರುವ ಕುರಿತು ವರದಿಯಾಗಿದೆ. ಪೊಲೀಸರು ಖಾತೆಗಳಲ್ಲಿ ನಡೆದಿರುವ ಹಣಕಾಸು ವಹಿವಾಟುಗಳ ಕುರಿತು ತನಿಖೆ ನಡೆಸುತ್ತಿದ್ದಾರೆ.