ಸೋಮವಾರ, 26 ಅಕ್ಟೋಬರ್ 2026
Trending

ಪಾಕಿಸ್ತಾನಿ ಬ್ಯೂಟಿ ಕ್ರೀಮ್‌ ಬಳಸಿ 18 ಮಹಿಳೆಯರ ಕಿಡ್ನಿ ವೈಫಲ್ಯ

Muslim Women

ಇ ಕಾಮರ್ಸ್‌ ಆಪ್‌ ಮೀಶೋ ಹಾಗೂ ಕೆಲವು ಇನ್‌ಸ್ಟಾಗ್ರಾಂ ಪುಟಗಳ ಮೂಲಕ ಮಾರಾಟವಾಗುತ್ತಿದ್ದ ಪಾಕಿಸ್ತಾನ ಮೂಲದ ಚರ್ಮ ಬಿಳುಪು ಮಾಡುವ ಕ್ರೀಮ್‌ ಬಳಸಿದ 18 ಮಹಿಳೆಯರು ತೀವ್ರ ಕಿಡ್ನಿ ಸಮಸ್ಯೆಗೆ ತುತ್ತಾಗಿದ್ದಾರೆ. ಮಹಾರಾಷ್ಟ್ರದ ನಾಗ್ಪುರದಲ್ಲಿ ಈ ಘಟನೆ ನಡೆದಿದೆ.

Sponsored

ಕಳೆದ ಎರಡು ವರ್ಷಗಳ ಅವಧಿಯಲ್ಲಿ ನಾಗ್ಪುರದ ವಿವಿಧ ಆಸ್ಪತ್ರೆಗಳಿಗೆ ಮೂತ್ರಪಿಂಡ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದ 18 ಮಹಿಳೆಯರು ಚಿಕಿತ್ಸೆಗೆ ದಾಖಲಾಗಿದ್ದರು. ಇವರೆಲ್ಲರ ಕೇಸ್‌ ಹಿಸ್ಟರಿಯನ್ನು ಆಳವಾಗಿ ಪರಿಶೀಲನೆ ಮಾಡಿದ ವೈದ್ಯರಿಗೆ ಒಂದು ಆಘಾತಕಾರಿ ಸಾಮ್ಯತೆ ಕಂಡು ಬಂದಿದೆ.

Advertisement
Advertisement

ಈ ಮಹಿಳೆಯರೆಲ್ಲರೂ ಮುಖದ ಕಾಂತಿ ಹೆಚ್ಚಳ ಮಾಡಲು ʼಗೋರಿ ಬ್ಯೂಟಿ ಕ್ರೀಮ್‌ʼ ಎನ್ನುವ ಒಂದೇ ಉತ್ಪನ್ನವನ್ನು ಬಹಳ ಕಾಲದಿಂದ ಬಳಸುತ್ತಿದ್ದರು. ಉದ್ಯಮಿ ಹಾಗೂ ಆರೋಗ್ಯ ಸಂಶೋಧಕ ಚಿರಾಗ್‌ ಬರ್ಜಾತ್ಯ ಅವರು ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ.

ಈ ಘನೆಯಿಂದ ಎಚ್ಚೆತ್ತ ಮಹಾರಾಷ್ಟ್ರ ಆಹಾರ ಮತ್ತು ಔಷಧ ಆಡಳಿತ ಇಲಾಖೆಯು ಮಾರುಕಟ್ಟೆಯಿಂದ ಕ್ರೀಮ್‌ನ ಮಾದರಿಗಳನ್ನು ವಶಪಡಿಸಿ, ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಿದಾಗ ಬೆಚ್ಚಿಬೀಳಿಸುವ ವರದಿಗಳು ಬೆಳಕಿಗೆ ಬಂದಿದೆ.

ಈ ಸೌಂದರ್ಯ ವರ್ಧಕಗಳಲ್ಲಿ ಕಾನೂನುಬದ್ಧವಾಗಿ ಅನುಮತಿಸಲಾದ ಮಿತಿಗಿಂತ ಬರೋಬ್ಬರಿ 752 ಪಟ್ಟು ಅಧಿಕ ಪಾದರಸ ಮತ್ತು ಅಪಾಯಕಾರಿ ಮಟ್ಟದಲ್ಲಿ ಸೀಸವನ್ನು ಅಳವಡಿಸಿರುವುದು ಪತ್ತೆಯಾಗಿದೆ.

ಪಾದರಸವು ಚರ್ಮದ ಬಣ್ಣಕ್ಕೆ ಕಾರಣವಾಗುವ ಮೆಲನಿನ್‌ ಉತ್ಪಾದನೆಯನ್ನು ತಡೆಯುತ್ತದೆ. ಇದರಿಂದ ಕ್ರೀಮ್‌ ಹಚ್ಚಿದ ಕೆಲವೇ ದಿನಗಳಲ್ಲಿ ಚರ್ಮವು ಬಿಳಿಯಾದಂತೆ ಕಾಣುತ್ತದೆ. ಆದರೆ ಇದು ಸೌಂದರ್ಯದಿಂದ ಆಗುವುದಲ್ಲ ಇದು ರಾಸಾಯನಿಕ ಹಾನಿಯಿಂದ ಆಗುವುದು. ಈ ವಿಷಕಾರಿ ಲೋಹವು ಚರ್ಮದ ರಂಧ್ರಗಳ ಮೂಲಕ ದೇಹಕ್ಕೆ ಹೋಗಿ, ಮೂತ್ರಪಿಂಡಗಳಲ್ಲಿ ಸಂಗ್ರಹವಾಗಿ ಅಂಗಾಗ ವೈಫಲ್ಯಕ್ಕೆ ಕಾರಣವಾಗುತ್ತದೆ.

ಈ ಎಲ್ಲಾ ವರದಿಗಳ ಮೇಲೆ ಮಹಾರಾಷ್ಟ್ರ ಎಫ್‌ಡಿಎ ಕೂಡಲೇ ಈ ಉತ್ಪನ್ನಗಳ ವಿತರಣೆ ಬಳಕೆಯನ್ನು ನಿಷೇಧ ಮಾಡಿದೆ.

ನಿಷೇಧಿತ ಉತ್ಪನ್ನಗಳು ಇಲ್ಲಿವೆ:
ಗೋರಿ ಬ್ಯೂಟಿ ಕ್ರೀಮ್ (Goree Beauty Cream) – (ಪಾಕಿಸ್ತಾನ ಮೂಲದ ಉತ್ಪನ್ನ)
ಫೇಸ್ ಫ್ರೆಶ್ ಗೋಲ್ಡ್ (ಬ್ಯೂಟಿ ಕ್ರೀಮ್ ಮತ್ತು ಬ್ಯೂಟಿ ಸೀರಮ್)
ಗೋಲ್ಡನ್ ಸ್ಟಾರ್ ಬ್ಯೂಟಿ ಕ್ರೀಮ್
ಈ ಕ್ರೀಮ್‌ಗಳು ಬ್ಯಾಚ್ ನಂಬರ್, ಮ್ಯಾನುಫ್ಯಾಕ್ಚರಿಂಗ್ ಡೇಟ್, ಎಕ್ಸ್‌ಪೈರಿ ಡೇಟ್ ಹಾಗೂ ತಯಾರಕರ ವಿಳಾಸದಂತಹ ಯಾವುದೇ ಕಡ್ಡಾಯ ನಿಯಮಾವಳಿಗಳ ಲೇಬಲ್ ಹೊಂದಿರದೆ ಕಾಸ್ಮೆಟಿಕ್ ಕಾಯ್ದೆಯನ್ನು ಸಂಪೂರ್ಣವಾಗಿ ಉಲ್ಲಂಘಿಸಿವೆ.

ಭಾರತ ಮತ್ತು ಪಾಕಿಸ್ತಾನದ ನಡುವೆ ಪ್ರಸ್ತುತ ಯಾವುದೇ ಅಧಿಕೃತ ವ್ಯಾಪಾರ ಸಂಬಂಧವಿಲ್ಲ. ಕೇಂದ್ರ ಸರಕಾರವು ಸಂಪೂರ್ಣವಾಗಿ ಪಾಕ್‌ ಆಮದನ್ನು ನಿಷೇಧ ಮಾಡಿದೆ. ಆದರೂ ಪಾಕಿಸ್ತಾನಿ ಮೂಲದ ಕ್ರೀಮ್‌ಗಳು ಇ-ಕಾಮರ್ಸ್‌ ವೇದಿಕೆ ಮೀಶೋ ಹಾಗೂ ಇನ್ಸ್‌ಟಾಗ್ರಾಂ ಪೇಜ್‌ನಲ್ಲಿ ಹೇಗೆ ಮಾರಾಟವಾಗುತ್ತಿತ್ತು ಎನ್ನುವುದು ಎಲ್ಲರ ಪ್ರಶ್ನೆ.

ಎಫ್‌ಡಿಎ ಎಚ್ಚರಿಕೆ ಹಾಗೂ ಮಾಧ್ಯಮದಲ್ಲಿ ಸುದ್ದಿ ವರದಿಯಾಗುತ್ತಲೇ ಮೀಶೋ ಕೂಡಲೇ ತನ್ನ ಫ್ಲಾಟ್‌ಫಾರ್ಮ್‌ನಿಂದ ಈ ಕ್ರೀಮನ್ನು ತೆಗೆದು ಹಾಕಿದೆ.

Advertisement