ವ್ಯಕ್ತಿಯೊಬ್ಬ ತುಂಡಾದ ತನ್ನ ಕೈಯನ್ನು ಪ್ಲಾಸ್ಟಿಕ್ ಚೀಲದೊಳಗೆ ಇಟ್ಟುಕೊಂಡು ಸರ್ಕಾರಿ ಆಸ್ಪತ್ರೆಗೆ ಬಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ತಮಿಳುನಾಡಿನ ತಿರುಪ್ಪೂರ್ ಜಿಲ್ಲೆಯ ಧಾರಾಪುರಂ ಬಳಿ ಈ ಘಟನೆ ನಡೆದಿದೆ. ದಿಂಡಿಗಲ್ ಮೂಲದ ಮುನಿಯಾಂಡಿ (32) ಎಂಬ ತೆಂಗು ಕೀಳುವ ಕಾರ್ಮಿಕ ಇತ್ತೀಚೆಗೆ ಕೌಂಡಚಿಪಾಳ್ಯಂ ಬಳಿಯ ಕೃಷಿ ಫಾರ್ಮ್‌ಗೆ ಕೆಲಸಕ್ಕೆ ಸೇರಿದ್ದನು. ಅಲ್ಲಿಯೇ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದ ರಂಜಿತ್ (32) ಎಂಬಾತನೊಂದಿಗೆ ತೆಂಗಿನಕಾಯಿ ಕೀಳುವ ಕೆಲಸದ ವಿಚಾರವಾಗಿ ತೀವ್ರ ಜಗಳ ನಡೆದಿತ್ತು.
ವಾಗ್ವಾದದ ವೇಳೆ ರಂಜಿತ್ ಕುಡುಗೋಲಿನಿಂದ ಮುನಿಯಾಂಡಿ ಮೇಲೆ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ಅವರ ಕೈ ತುಂಡಾಗಿದೆ. ನೋವಿನಿಂದ ಬಳಲುತ್ತಿದ್ದ ಮುನಿಯಾಂಡಿ, ತುಂಡಾದ ಕೈಯನ್ನು ಪ್ಲಾಸ್ಟಿಕ್ ಕವರ್‌ನಲ್ಲಿ ಇಟ್ಟುಕೊಂಡು ಖಾಸಗಿ ಆಂಬುಲೆನ್ಸ್ ಮೂಲಕ ಧಾರಾಪುರಂ ಸರ್ಕಾರಿ ಆಸ್ಪತ್ರೆಗೆ ಬಂದಿದ್ದಾರೆ.
ತುಂಡಾದ ಕೈಯನ್ನು ಮರುಜೋಡಿಸುವ ಶಸ್ತ್ರಚಿಕಿತ್ಸೆಗೆ ಅಗತ್ಯ ಸೌಲಭ್ಯಗಳು ಧಾರಾಪುರಂ ಆಸ್ಪತ್ರೆಯಲ್ಲಿ ಇರಲಿಲ್ಲ. ಹೀಗಾಗಿ ವೈದ್ಯರು ಕೈಯನ್ನು ಐಸ್ ಬಾಕ್ಸ್‌ನಲ್ಲಿ ಇರಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಕೊಯಮತ್ತೂರು ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದ್ದಾರೆ. ಘಟನೆ ಸಂಬಂಧ ಮುಳನೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

