ಶನಿವಾರ, 24 ಅಕ್ಟೋಬರ್ 2026

ವೈದ್ಯರೇ ಶಾಕ್! ಮಹಿಳೆಯ ಹೊಟ್ಟೆಯಿಂದ ಹೊರಬಂದ 14 ಪೆನ್, 5 ಚಮಚ ಮತ್ತು ಮೇಣದಬತ್ತಿ

ಆಂಧ್ರಪ್ರದೇಶ: ಪಲ್ನಾಡು ಜಿಲ್ಲೆಯಲ್ಲಿ ನಡೆದ ವಿಚಿತ್ರ ವೈದ್ಯಕೀಯ ಘಟನೆ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. ತೀವ್ರ ಹೊಟ್ಟೆ ಹಾಗೂ ಎದೆ ನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದ 33 ವರ್ಷದ ಮಹಿಳೆಯ ಹೊಟ್ಟೆಯಲ್ಲಿ ವೈದ್ಯರಿಗೆ ಅಚ್ಚರಿಗೊಳಿಸುವ ವಸ್ತುಗಳು ಪತ್ತೆಯಾಗಿವೆ.
ಪೆಟ್ಲೂರಿವಾರಿಪಾಲೆಂ ಗ್ರಾಮದ ಮಹಿಳೆಯನ್ನು ಕುಟುಂಬಸ್ಥರು ನರಸರಾವ್ ಪೇಟೆಯ ಮಾತಾಶ್ರೀ ಆಸ್ಪತ್ರೆಗೆ ದಾಖಲಿಸಿದ್ದರು. ವೈದ್ಯರು ಎಕ್ಸ್‌ರೇ ಹಾಗೂ ಅಲ್ಟ್ರಾಸೌಂಡ್ ಪರೀಕ್ಷೆ ನಡೆಸಿದಾಗ ಜೀರ್ಣಾಂಗದಲ್ಲಿ ಅಸಹಜ ವಸ್ತುಗಳು ಇರುವುದು ಬೆಳಕಿಗೆ ಬಂದಿದೆ.
ತಕ್ಷಣ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು ಮಹಿಳೆಯ ಹೊಟ್ಟೆಯಿಂದ 14 ಪ್ಲಾಸ್ಟಿಕ್ ಪೆನ್ನುಗಳು, 5 ಮರದ ಚಮಚಗಳು ಹಾಗೂ ಒಂದು ಮೇಣದಬತ್ತಿಯನ್ನು ಹೊರತೆಗೆದಿದ್ದಾರೆ. ಶಸ್ತ್ರಚಿಕಿತ್ಸೆ ಲ್ಯಾಪ್ರೋಸ್ಕೋಪಿಕ್ ವಿಧಾನದಲ್ಲಿ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಸದ್ಯ ಮಹಿಳೆಯ ಆರೋಗ್ಯ ಸ್ಥಿರವಾಗಿದೆ.
ವೈದ್ಯರ ಪ್ರಕಾರ, ಹೊಟ್ಟೆಯಲ್ಲಿದ್ದ ಪೆನ್ನೊಂದರ ಕ್ಯಾಪ್ ಕಳೆದುಹೋಗಿದ್ದರಿಂದ ಅದರ ಭಾಗ ಒಳಭಾಗಕ್ಕೆ ಚುಚ್ಚಿ ನೋವು ಉಂಟಾಗಿರುವ ಸಾಧ್ಯತೆಯಿದೆ.
ಮಾನಸಿಕ ಆರೋಗ್ಯದ ಹಿನ್ನೆಲೆ
ಮಹಿಳೆಯ ತಂದೆ ನೋಮುಲ ಹನುಮಂತರಾವ್ ಅವರ ಮಾಹಿತಿ ಪ್ರಕಾರ, ಆಕೆ ಕಳೆದ ಸುಮಾರು 10 ವರ್ಷಗಳಿಂದ ಮಾನಸಿಕ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಎರಡು ತಿಂಗಳ ಹಿಂದೆ ಆಕೆಯ ಪತಿಯಿಂದ ವಿಚ್ಛೇದನವೂ ಆಗಿತ್ತು. ಈ ಹಿನ್ನೆಲೆಯಲ್ಲಿ ಉಂಟಾದ ಮಾನಸಿಕ ಒತ್ತಡದಿಂದ ಇಂತಹ ವಸ್ತುಗಳನ್ನು ನುಂಗಿರಬಹುದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ವೈದ್ಯರು ಸಮಯಕ್ಕೆ ಸರಿಯಾಗಿ ಪರಿಸ್ಥಿತಿಯನ್ನು ಗುರುತಿಸಿ ಶಸ್ತ್ರಚಿಕಿತ್ಸೆ ನಡೆಸಿದ್ದರಿಂದ ಮಹಿಳೆಯ ಜೀವ ಉಳಿದಿದೆ. ಸದ್ಯ ಆಕೆ ಆಸ್ಪತ್ರೆಯಲ್ಲಿ ವೈದ್ಯರ ನಿಗಾದಲ್ಲಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ.
ಈ ಘಟನೆ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ನಿರ್ಲಕ್ಷಿಸಬಾರದು ಎಂಬುದನ್ನು ಮತ್ತೊಮ್ಮೆ ಎಚ್ಚರಿಸಿದೆ. ಮಾನಸಿಕ ಒತ್ತಡ ಅಥವಾ ಇತರ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಕುಟುಂಬಸ್ಥರು ಸೂಕ್ತ ಬೆಂಬಲ ನೀಡುವುದರ ಜೊತೆಗೆ ಅಗತ್ಯವಿದ್ದಲ್ಲಿ ತಜ್ಞರ ನೆರವು ಪಡೆಯುವುದು ಮುಖ್ಯವಾಗಿದೆ.