ಅಮೆರಿಕದ ನ್ಯೂಯಾರ್ಕ್ನಲ್ಲಿರುವ ವಿಶ್ವಪ್ರಸಿದ್ಧ ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್ನಲ್ಲಿ ನಡೆದ ‘ಯೂನಿವರ್ಸಲ್ ಒನ್ನೆಸ್ ಸೆಲೆಬ್ರೇಷನ್’ (ವಿಶ್ವ ಏಕತೆ ಆಚರಣೆ) ಕಾರ್ಯಕ್ರಮದಲ್ಲಿ ಆರ್ಎಸ್ಎಸ್ ಸರಸಂಘಚಾಲಕ್ ಮೋಹನ್ ಭಾಗವತ್ ಭಾಗವಹಿಸಿ ಹಿಂದುತ್ವ, ಮುಸ್ಲಿಮರು ಹಾಗೂ ‘ಹಿಂದೂ ರಾಷ್ಟ್ರ’ದ ಕುರಿತು ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಭಾರತದಲ್ಲಿ ಮತ್ತು ವಿದೇಶಗಳಲ್ಲಿ RSSನ ನಿಲುವು ಹಾಗೂ ಭಾಷೆಯಗಳಲ್ಲಿ ವ್ಯತ್ಯಾಸ ಕಂಡುಬರುತ್ತಿದೆ ಎಂದು ಟೀಕಿಸಿದ್ದಾರೆ.
ಭಾಗವತ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಪ್ರಿಯಾಂಕ್ ಖರ್ಗೆ, “ಪ್ರೇಕ್ಷಕರು ಬದಲಾದಾಗ ಭಾಷೆಯಲ್ಲೂ ಎಷ್ಟು ದೊಡ್ಡ ಬದಲಾವಣೆ!” ಎಂದು ವ್ಯಂಗ್ಯವಾಡಿದ್ದಾರೆ. ಅಲ್ಲದೆ RSS ಭಾರತದಲ್ಲಿ ಕಳೆದ ಒಂದು ಶತಮಾನದಿಂದ ‘ಹಿಂದೂ ರಾಷ್ಟ್ರ’ದ ಪರಿಕಲ್ಪನೆಯನ್ನು ಪ್ರತಿಪಾದಿಸುತ್ತಾ ಬಂದಿದೆ. ಆದರೆ, ಅಮೆರಿಕದ ನೆಲದಲ್ಲಿ ಧಾರ್ಮಿಕ ಸೌಹಾರ್ದ, ವಿಶ್ವಮಾನವ ಏಕತೆ ಮತ್ತು ಎಲ್ಲರನ್ನು ಒಳಗೊಂಡ ಸಮಾಜದ ಕುರಿತು ಮಾತನಾಡಲಾಗುತ್ತಿದೆ. ಭಾರತದಲ್ಲಿ ಪ್ರತಿಪಾದಿಸುವ ನಿಲುವು ಮತ್ತು ವಿದೇಶದಲ್ಲಿ ನೀಡುವ ಸಂದೇಶದ ನಡುವಿನ ಈ ವ್ಯತ್ಯಾಸವನ್ನು ಗಮನಿಸಬೇಕಾಗಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಮೋಹನ್ ಭಾಗವತ್ ಅವರ ಮೂರು ರಾಷ್ಟ್ರಗಳ ಪ್ರವಾಸ ಹಾಗೂ ಅವರು ನೀಡುತ್ತಿರುವ ‘ವಿಶ್ವಮಾನವ ಏಕತೆ’ ಸಂದೇಶವನ್ನು ಭಾರತೀಯ ಮೂಲದ ವಲಸಿಗರಿಂದ ನಿಧಿ ಸಂಗ್ರಹಿಸಲು RSS ಬಳಸಿಕೊಳ್ಳುತ್ತಿದೆಯೇ ಎಂಬ ಪ್ರಶ್ನೆಯನ್ನೂ ಅವರು ಎತ್ತಿದ್ದಾರೆ. ವಿದೇಶಗಳಲ್ಲಿರುವ ಭಾರತೀಯ ಸಮುದಾಯವನ್ನು ಸಂಘಟಿಸುವಲ್ಲಿ RSSನ ವಿದೇಶಿ ಜಾಲದ ಪಾತ್ರದ ಬಗ್ಗೆಯೂ ಪರಿಶೀಲನೆ ಅಗತ್ಯವಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.



