ಶನಿವಾರ, 24 ಅಕ್ಟೋಬರ್ 2026

ಯಶವಂತಪುರ ಎಕ್ಸ್‌ಪ್ರೆಸ್‌ನಲ್ಲಿ ತಾಂತ್ರಿಕ ದೋಷ; ರೊಚ್ಚಿಗೆದ್ದ ಪರೀಕ್ಷಾರ್ಥಿಗಳು

ವಿಜಯಪುರ: ಬೆಂಗಳೂರಿನಲ್ಲಿ ನಡೆಯಲಿರುವ ಸಿಎಆರ್‌ ಮತ್ತು ಡಿಎಆರ್‌ ಪೊಲೀಸ್ ಕಾನ್ಸ್‌ಟೇಬಲ್‌ ನೇಮಕಾತಿ ಪರೀಕ್ಷೆಗೆ ತೆರಳುತ್ತಿದ್ದ ನೂರಾರು ಅಭ್ಯರ್ಥಿಗಳು ರೈಲು ಕೆಟ್ಟ ಕಾರಣ ಕೆಲಕಾಲ ಆತಂಕಕ್ಕೊಳಗಾದ ಘಟನೆ ನಡೆದಿದೆ.

ವಿಜಯಪುರದಿಂದ ಬೆಂಗಳೂರಿನತ್ತ ಸಂಚರಿಸುತ್ತಿದ್ದ ಯಶವಂತಪುರ ಎಕ್ಸ್‌ಪ್ರೆಸ್‌ ರೈಲು ಹೊರಟ ಕೆಲವೇ ಕಿಲೋಮೀಟರ್‌ಗಳ ಬಳಿಕ ಇಂಜಿನ್‌ನಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದೆ. ಪರಿಣಾಮ ರೈಲು ಸುಮಾರು ನಾಲ್ಕು ಗಂಟೆಗಳ ಕಾಲ ಮಾರ್ಗಮಧ್ಯದಲ್ಲೇ ನಿಂತಿತ್ತು.

ರೈಲು ನಿಗದಿತ ಸಮಯಕ್ಕೆ ಬೆಂಗಳೂರಿಗೆ ತಲುಪದಿರುವುದರಿಂದ ಆತಂಕಗೊಂಡ 500ಕ್ಕೂ ಹೆಚ್ಚು ಪರೀಕ್ಷಾರ್ಥಿಗಳು ರೈಲ್ವೆ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಲವರು ರೈಲಿನಿಂದ ಇಳಿದು ಪ್ರತಿಭಟನೆ ನಡೆಸಿದ್ದು, ಪಕ್ಕದ ಹಳಿಯಲ್ಲಿ ಸಂಚರಿಸುತ್ತಿದ್ದ ಬಸವ ಎಕ್ಸ್‌ಪ್ರೆಸ್‌ ರೈಲನ್ನು ತಡೆದು ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ರೈಲ್ವೆ ಪೊಲೀಸರು ಅಭ್ಯರ್ಥಿಗಳೊಂದಿಗೆ ಮಾತುಕತೆ ನಡೆಸಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ. ಬಳಿಕ ಪರ್ಯಾಯ ಇಂಜಿನ್‌ ವ್ಯವಸ್ಥೆ ಮಾಡಿ ಯಶವಂತಪುರ ಎಕ್ಸ್‌ಪ್ರೆಸ್‌ ರೈಲಿನ ಸಂಚಾರವನ್ನು ಪುನರಾರಂಭಿಸಲಾಗಿದೆ.

ಪರೀಕ್ಷಾರ್ಥಿಗಳು ಬೆಳಗ್ಗೆ 9.30ರೊಳಗೆ ಪರೀಕ್ಷಾ ಕೇಂದ್ರಗಳಿಗೆ ಹಾಜರಾಗಬೇಕಿದ್ದ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆ ರೈಲಿಗೆ ಆದ್ಯತೆ ನೀಡಿದೆ. ಮಾರ್ಗದಲ್ಲಿನ ಜಂಕ್ಷನ್‌ಗಳಲ್ಲಿ ಸಂಚಾರವನ್ನು ನಿಯಂತ್ರಿಸಿ ‘ಗ್ರೀನ್ ಕಾರಿಡಾರ್‌’ ವ್ಯವಸ್ಥೆ ಮೂಲಕ ರೈಲನ್ನು ವೇಗವಾಗಿ ಬೆಂಗಳೂರಿನತ್ತ ಕಳುಹಿಸಲಾಗಿದೆ.

ಇದರ ಫಲವಾಗಿ ರೈಲು ನಿಗದಿತ ಸಮಯಕ್ಕಿಂತ ಸುಮಾರು ಎರಡು ಗಂಟೆ ಮುಂಚಿತವಾಗಿ ಬೆಳಗ್ಗೆ 7.15ಕ್ಕೆ ಯಶವಂತಪುರ ತಲುಪಿದೆ. ಇದರಿಂದ ಪರೀಕ್ಷಾರ್ಥಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟು, ತಮ್ಮ ತಮ್ಮ ಪರೀಕ್ಷಾ ಕೇಂದ್ರಗಳತ್ತ ತೆರಳಿದ್ದಾರೆ.