ಮಡಿಕೇರಿ: ನಗರಸಭೆ ವ್ಯಾಪ್ತಿಯಲ್ಲಿ ಅಡಿಕೆ ತಟ್ಟೆ, ಪೇಪರ್ ಕಪ್, ಪೇಪರ್ ಪ್ಲೇಟ್ ಸೇರಿದಂತೆ ಹಲವು ವಸ್ತುಗಳ ಬಳಕೆ ಹಾಗೂ ಮಾರಾಟಕ್ಕೆ ನಗರಸಭೆ ನಿರ್ಬಂಧ ವಿಧಿಸಿದೆ.
ನಗರಸಭೆ ಆಡಳಿತ ಮಂಡಳಿ ಹಾಗೂ ಪೌರಾಯುಕ್ತರ ಸೂಚನೆಯಂತೆ ಪೇಪರ್ ಕಪ್ಗಳು, ಕಂಟೈನರ್ಗಳು, ಅಡಿಕೆ ತಟ್ಟೆಗಳು, ಕಾಲು ಲೀಟರ್, ಅರ್ಧ ಲೀಟರ್ ಹಾಗೂ ಒಂದು ಲೀಟರ್ ಸಾಮರ್ಥ್ಯದ ನೀರಿನ ಬಾಟಲಿಗಳು ಮತ್ತು ಪೇಪರ್ ಪ್ಲೇಟ್ಗಳ ಬಳಕೆಯನ್ನು ನಿಷೇಧಿಸಲಾಗಿದೆ. ಈ ಕುರಿತು ನಗರಸಭೆ ಸಿಬ್ಬಂದಿ ವ್ಯಾಪಾರಿಗಳಿಗೆ ಆದೇಶದ ಪ್ರತಿಗಳನ್ನು ನೀಡಿ ಮಾಹಿತಿ ನೀಡಿದ್ದಾರೆ.
ಆದರೆ, ಪರಿಸರ ಸ್ನೇಹಿ ಎಂದು ಪರಿಗಣಿಸಲಾಗುವ ಅಡಿಕೆ ಎಲೆಗಳಿಂದ ತಯಾರಿಸಿದ ತಟ್ಟೆಗಳು ಹಾಗೂ ಪೇಪರ್ ಉತ್ಪನ್ನಗಳ ಮೇಲೆಯೂ ನಿರ್ಬಂಧ ಹೇರಿರುವುದಕ್ಕೆ ವ್ಯಾಪಾರಿಗಳು ಮತ್ತು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಡಿಕೆ ಎಲೆಗಳಿಂದ ತಯಾರಿಸುವ ತಟ್ಟೆಗಳು ಮಣ್ಣಿನಲ್ಲಿ ಸುಲಭವಾಗಿ ಕೊಳೆಯುತ್ತವೆ. ದೇವಾಲಯಗಳ ಜಾತ್ರೆ, ಸರ್ಕಾರಿ ಹಾಗೂ ಸಾರ್ವಜನಿಕ ಕಾರ್ಯಕ್ರಮಗಳು ಮತ್ತು ಕ್ರೀಡಾಕೂಟಗಳಲ್ಲಿ ಇಂತಹ ತಟ್ಟೆ ಹಾಗೂ ಪೇಪರ್ ಕಪ್ಗಳನ್ನು ವ್ಯಾಪಕವಾಗಿ ಬಳಸಲಾಗುತ್ತದೆ. ಕಾರ್ಯಕ್ರಮಗಳ ಬಳಿಕ ಅವುಗಳನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಲಾಗುತ್ತದೆ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.
ಈ ಬಗ್ಗೆ ಕೊಡಗು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಉಪಾಧ್ಯಕ್ಷ ನವೀನ್ ಅಂಬೇಕಲ್ ಮಾತನಾಡಿ, ನಗರಸಭೆ ತನ್ನ ವ್ಯಾಪ್ತಿಯಲ್ಲಿ ನಿರ್ಧಾರ ಕೈಗೊಂಡಿರುವುದು ಸರಿಯೇ. ಆದರೆ, ಮಡಿಕೇರಿಗೆ ಹೊರಗಿನಿಂದ ಬರುವವರು ಈ ವಸ್ತುಗಳನ್ನು ತಮ್ಮೊಂದಿಗೆ ತಂದು ಖಾಸಗಿ ಕಾರ್ಯಕ್ರಮಗಳಲ್ಲಿ ಬಳಸುವುದನ್ನು ನಗರಸಭೆ ಹೇಗೆ ನಿಯಂತ್ರಿಸುತ್ತದೆ ಎಂಬ ಪ್ರಶ್ನೆ ಇದೆ ಎಂದು ಹೇಳಿದ್ದಾರೆ.
ಜಿಲ್ಲಾ ಆಡಳಿತದೊಂದಿಗೆ ಸಮಾಲೋಚನೆ ನಡೆಸದೆ ನಗರಸಭೆ ಇಂತಹ ನಿರ್ಧಾರ ಕೈಗೊಂಡಿರುವುದು ಸೂಕ್ತವಲ್ಲ. ಇದೇ ರೀತಿಯ ನಿರ್ಬಂಧವನ್ನು ಇಡೀ ಕೊಡಗು ಜಿಲ್ಲೆಗೆ ಅನ್ವಯಿಸಿದರೆ ಯಾವುದೇ ಗೊಂದಲ ಉಂಟಾಗುವುದಿಲ್ಲ ಎಂದು ಅವರು ತಿಳಿಸಿದ್ದಾರೆ.



