ಸುಬ್ರಹ್ಮಣ್ಯ: ಹನಿಟ್ರ್ಯಾಪ್, ಬೆಳಗಾವಿ ಜಿಲ್ಲೆಯ ಹಾರೂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ ದರೋಡೆ ಸೇರಿ ಹಲವು ಪ್ರಕರಣಗಳಿಗೆ ಸಂಬಂಧಿಸಿ ಕಳೆದ ಒಂದು ತಿಂಗಳಿನಿಂದ ತಲೆಮರೆಸಿಕೊಂಡಿದ್ದ ಮೂವರು ಆರೋಪಿಗಳನ್ನು ಕುಕ್ಕೆ ಸುಬ್ರಹ್ಮಣ್ಯ ಪೊಲೀಸರು ಕಾರ್ಯಾಚರಣೆ ಮಾಡಿ ಬಂಧಿಸಿ ಬೆಳಗಾವಿ ಪೊಲೀಸರಿಗೆ ಹಸ್ತಾಂತರ ಮಾಡಿದ ಘಟನೆ ಶುಕ್ರವಾರ ನಡೆದಿದೆ.


ಆರೋಪಿಗಳು ಅಲ್ಲಿ ಪೊಲೀಸರಿಂದ ತಪ್ಪಿಸಿಕೊಂಡು ತಲೆಮರೆಸಿಕೊಂಡಿದ್ದರು ಎನ್ನಲಾಗಿದೆ. ಕುಕ್ಕೆ ಸುಬ್ರಹ್ಮಣ್ಯಕ್ಕೆ ಬಂದಿರುವ ಕುರಿತು ಪೊಲೀಸರಿಗೆ ಖಚಿತ ಮಾಹಿತಿ ಲಭಿಸಿದ್ದು, ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದ್ದರು.
ಸ್ಥಳೀಯರು ಹಾಗೂ ಆಟೋ ಚಾಲಕರ ಸಹಕಾರದಿಂದ ಕುಮಾರಧಾರಾ ಬಳಿ ಇತರ ವಾಹನಗಳನ್ನು ರಸ್ತೆಗೆ ಅಡ್ಡವಾಗಿ ನಿಲ್ಲಿಸಿ ಆರೋಪಿಗಳು ಪ್ರಯಾಣ ಮಾಡುತ್ತಿದ್ದ ತೂಫಾಣ್ ವಾಹನವನ್ನು ತಡೆದು ಕಾರ್ಯಾಚರಣೆ ಮಾಡಿದಾಗ, ವಾಹನದಲ್ಲಿದ್ದ ಮೂವರನ್ನು ವಶಕ್ಕೆ ಪಡೆಯಲಾಯಿತು.
ಬಂಧಿತರನ್ನು ಮುಂದಿನ ತನಿಖೆಗೆ ಬೆಳಗಾವಿ ಪೊಲೀಸರಿಗೆ ಹಸ್ತಾಂತರ ಮಾಡಲಾಗಿದೆ. ಆರೋಪಿಗಳನ್ನು ವಶಕ್ಕೆ ಪಡೆದುಕೊಳ್ಳಲು ಬೆಳಗಾವಿ ಪೊಲೀಸರು ಸುಬ್ರಹ್ಮಣ್ಯಕ್ಕೆ ಬಂದಿದ್ದರು.

