ಶನಿವಾರ, 24 ಅಕ್ಟೋಬರ್ 2026

ಉಡುಪಿ ವಿಟ್ಲಪಿಂಡಿ ಉತ್ಸವ- ಕೃಷ್ಣನ ಮೂರ್ತಿ ಭಗ್ನ ಶುಭವೋ ? ಅಶುಭವೋ ? ವಿದ್ವಾಂಸರು ಹೇಳಿದ್ದೇನು?

ಶ್ರೀಕೃಷ್ಣ ಜನ್ಮಾಷ್ಟಮಿಯ ಮರುದಿನ ಉಡುಪಿಯ ರಥಬೀದಿಯಲ್ಲಿ ಅತ್ಯಂತ ವಿಜೃಂಭಣೆಯಿಂದ ನಡೆದ ವಿಟ್ಲಪಿಂಡಿ ಉತ್ಸವದ ಕೊನೆಯ ಹಂತದಲ್ಲಿ ಶ್ರೀಕೃಷ್ಣನ ಮಣ್ಣಿನ ಮೂರ್ತಿಯು ಕೆಳಗೆ ಬಿದ್ದು ಸ್ವಲ್ಪ ಭಗ್ನಗೊಂಡು ಇಡೀ ಭಕ್ತ ಸಮೂಹವು ಆತಂಕದಲ್ಲಿ ಮುಳುಗುವಂತೆ ಮಾಡಿತ್ತು. ಇದು ಅಪಶಕುನದ ಸೂಚನೆಯೇ ಎಂಬ ಚರ್ಚೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. ಇದೀಗ ಈ ಘಟನೆ ಶುಭವೊ? ಶುಭವೋ? ಎಂಬ ಬಗ್ಗೆ ವಿದ್ವಾಂಸರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

ಅಷ್ಟಮಠಗಳ ವಿದ್ವಾಂಸರು ಇದಕ್ಕೆ ಸ್ಪಷ್ಟನೆ ನೀಡಿದ್ದು, “ಉತ್ಸವದ ಕೊನೆಯ ಭಾಗವಾದ ಮಂಗಳಾರತಿ ನೆರವೇರಿದ ನಂತರ ಮೂರ್ತಿಯನ್ನು ವಿಸರ್ಜಿಸಲು ತರಲಾಗುತ್ತಿತ್ತು. ಪೂಜೆ ಸಂಪೂರ್ಣಗೊಂಡ ಬಳಿಕ ಈ ಘಟನೆ ನಡೆದಿರುವುದರಿಂದ ಯಾವುದೇ ಧಾರ್ಮಿಕ ದೋಷವಾಗಲಿ ಅಥವಾ ಅಪಚಾರವಾಗಲಿ ಸಂಭವಿಸಿಲ್ಲ” ಎಂದು  ಅಭಿಪ್ರಾಯಪಟ್ಟಿದ್ದಾರೆ.

ವಾರಾಂತ್ಯದಲ್ಲಿ ಉತ್ಸವ ನಡೆದಿದ್ದರಿಂದ ಕೃಷ್ಣ ನಗರಿಗೆ ಲಕ್ಷಾಂತರ ಭಕ್ತರು ಹರಿದುಬಂದಿದ್ದರು. ಮಠದ ವತಿಯಿಂದ ಆಗಮಿಸಿದ ಭಕ್ತಾದಿಗಳಿಗೆ ಸುಮಾರು 1.50 ಲಕ್ಷ ಚಕ್ಕುಲಿ ಹಾಗೂ 1.50 ಲಕ್ಷ ಐದು ಬಗೆಯ ಉಂಡೆಗಳ ಪ್ಯಾಕೆಟ್‌ಗಳನ್ನು ಪ್ರಸಾದವಾಗಿ ವಿತರಿಸಲಾಯಿತು. ಇತ್ತೀಚೆಗೆ ಶಿರೂರು ಮಠದ ಶ್ರೀಗಳು ಮಾತನಾಡಿ, “ದೇಶಕ್ಕೆ ಕಾಳಸರ್ಪ ಯೋಗವಿದ್ದು ಕಂಟಕದ ಸಮಯವಿದೆ. ಮಠದಲ್ಲಿನ ದೋಷಗಳಿಗೆ ಶೀಘ್ರವೇ ಪರಿಹಾರ ಕಾರ್ಯ ನೆರವೇರಿಸಲಾಗುವುದು” ಎಂದು ತಿಳಿಸಿದ್ದನ್ನು ಈ ಸಂದರ್ಭದಲ್ಲಿ ಸ್ಮರಿಸಬಹುದಾಗಿದೆ.