ಭಾನುವಾರ, 25 ಅಕ್ಟೋಬರ್ 2026
Trending

ತಮ್ಮದೇ ಕ್ಯಾಮರಾಮ್ಯಾನ್ ನ ಮದುವೆಯಾದ ಮೂವರು ರಿಲ್ಸ್ ಸಹೋದರಿಯರು !!

ಉತ್ತರ ಪ್ರದೇಶದಲ್ಲಿ ಮೂವರು ರೀಲ್ಸ್ ಮಾಡುವ ಸಹೋದರಿಯರು ತಮ್ಮ ಕ್ಯಾಮರಾಮ್ಯಾನ್ ನ ವರಿಸಿರುವ ಆಶ್ಚರ್ಯಕರ ಘಟನೆ ಒಂದು ಬೆಳಕಿಗೆ ಬಂದಿದೆ. ಜೊತೆಗೆ ತಾವೇಕೆ ಈ ನಿರ್ಧಾರವನ್ನು ಕೈಗೊಂಡೆವು ಎಂದು ಆ ಮೂವರು ಸಹೋದರಿಯರು ಕಾರಣವನ್ನು ಕೂಡ ನೀಡಿ ಎಲ್ಲರನ್ನು ಬೆರಗಾಗಿಸಿದ್ದಾರೆ.

Sponsored

ಹೌದು, ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯ ಧೌರಿಯಾ ಗ್ರಾಮದವರಾದ ಸರೋಜಾ, ಸಾವಿತ್ರಿ ಮತ್ತು ಸಂತೋಷಾ ಎಂಬ ಮೂವರು ಸಹೋದರಿಯರು ಶ್ಯಾಮಪುರಿ ಗ್ರಾಮದ ವಿಕಾಸ್ (ವಿಕ್ಕಿ) ಎಂಬ ಯುವಕನನ್ನು ಮದುವೆಯಾಗಿದ್ದಾರೆ. ಇದಕ್ಕೆ ಉದಾಹರಣೆ ಸಮೇತ ಕಾರಣವನ್ನು ನೀಡಿದ್ದಾರೆ. ಕಳೆದ ಜುಲೈ 17ರಂದು ಇವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಆದರೆ ಎರಡೂ ಕುಟುಂಬದ ಯಾರೊಬ್ಬರೂ ಕೂಡ ಮದುವೆಗೆ ಹಾಜರಾಗಿಲ್ಲ ಎಂದು ತಿಳಿದುಬಂದಿದೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಈ ಮೂವರು ಸಹೋದರಿಯರು ಸಾಮಾಜಿಕ ಮಾಧ್ಯಮದಲ್ಲಿ ರೀಲ್ಸ್​​ ಮಾಡಿಕೊಂಡು ಫೇಮಸ್​ ಆಗಿರುವವರು. ಇವರು ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್‌ನಲ್ಲಿ ವೀಡಿಯೊಗಳನ್ನು ಮಾಡಿ ಅಪ್ಲೋಡ್ ಮಾಡುತ್ತಿದ್ದಾರೆ. ಪ್ರಸ್ತುತ ಕೇವಲ 27 ವೀಡಿಯೊಗಳನ್ನು ಮಾತ್ರ ಅಪ್‌ಲೋಡ್ ಮಾಡಲಾಗಿದೆ. ಆದರೆ ಅವರು ಈಗಾಗಲೇ ಇನ್‌ಸ್ಟಾಗ್ರಾಮ್‌ನಲ್ಲಿ 4.69 ಲಕ್ಷಕ್ಕೂ ಹೆಚ್ಚು ಮತ್ತು ಫೇಸ್‌ಬುಕ್‌ನಲ್ಲಿ 84 ಸಾವಿರಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ.

ಇವರಲ್ಲಿ ಸರೋಜಾ ಎರಡನೇ ವರ್ಷದ ಬಿ.ಟೆಕ್ ವಿದ್ಯಾರ್ಥಿನಿ, ಸಾವಿತ್ರಿ ಮತ್ತು ಸಂತೋಷಾ 12ನೇ ತರಗತಿ ಪಾಸ್. ಅವರ ತಂದೆ ರಮೇಶ್ ರೈತರಾಗಿದ್ದಾರೆ. ವಿಕಾಸ್ ಈ ಮೂವರಿಗೂ ಕ್ಯಾಮೆರಾಮನ್ ಆಗಿ ಕೆಲಸ ಮಾಡುತ್ತಿದ್ದ. ಅಂದರೆ ಈ ಮೂವರು ಯುವತಿಯರು ವಿಡಿಯೋ ಮಾಡಲು ಆತನೇ ಕ್ಯಾಮರ ಮ್ಯಾನ್ ಆಗಿದ್ದ. ಕಳೆದ ಆರು ತಿಂಗಳಿನಿಂದ ಇವರೊಂದಿಗೆ ತುಂಬಾ ಆತ್ಮೀಯತೆ ಬೆಳೆದಿತ್ತು. ವಿಕಾಸ್ ಈ ವರ್ಷ 12ನೇ ತರಗತಿ ಪಾಸ್ ಮಾಡಿದ್ದಾರೆ. 

ಏಕೆ ಈ ನಿರ್ಧಾರ?

ಮೂವರು ಸಹೋದರಿಯರು ಬಾಲ್ಯದಿಂದಲೂ ಒಟ್ಟಿಗೆ ಇದ್ದಾರೆ. ಹೀಗಾಗಿ ಭವಿಷ್ಯದಲ್ಲೂ ಒಟ್ಟಿಗೆ ಇರಬೇಕೆಂಬುದು ಅವರ ಆಸೆ. ಆದರೆ ಅವರ ಕುಟುಂಬದವರು ಮೂವರನ್ನು ಬೇರೆ ಬೇರೆಯವರಿಗೆ ಮದುವೆ ಮಾಡಲು ಪ್ರಯತ್ನಿಸಿದಾಗ ಅವರು ಒಂದೇ ವ್ಯಕ್ತಿಯನ್ನು ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಹೇಳಿದ್ದಾರೆ. ವಿಕಾಸ್ ಕೂಡ ‘ಅವರ ಭಾವನೆಗಳನ್ನು ಅರ್ಥಮಾಡಿಕೊಂಡು ಮೂವರನ್ನೂ ಮದುವೆಯಾದೆ’ ಎಂದು ಹೇಳಿದ್ದಾರೆ. ಸದ್ಯ ವಿವಾಹದ ವೀಡಿಯೊ ವೈರಲ್ ಆದ ನಂತರ ದೊಡ್ಡ ಕೋಲಾಹಲ ಎದ್ದಿದೆ. ಹಿಂದೂ ಸಂಘಟನೆಗಳ ಮುಖಂಡರು ಇದನ್ನು ಸನಾತನ ಧರ್ಮಕ್ಕೆ ವಿರುದ್ಧವಾದ ಕ್ರಿಯೆ ಎಂದು ಟೀಕಿಸಿದ್ದಾರೆ. 

ತಮ್ಮ ಮದುವೆಯ ಬಗ್ಗೆ ಆಕ್ರೋಶಗಳು ಹಾಗೂ ವಿವಾದಗಳು ಎದ್ದ ಬೆನ್ನಲ್ಲೇ ಮೂವರು ಸಹೋದರಿಯರು ವಿಡಿಯೋ ಮಾಡಿ ಸ್ಪಷ್ಟೀಕರಣ ಕೊಟ್ಟಿದ್ದು, ಪ್ರಾಚೀನ ಕಾಲದಲ್ಲಿ ರಾಜ ದಶರಥನಿಗೆ ಮೂವರು ರಾಣಿಯರಿದ್ದರು. ಅದು ತಪ್ಪೇ? ನಾವು ಯಾವುದೇ ತಪ್ಪು ಮಾಡಿಲ್ಲ. ಇದು ಪ್ರೀತಿಯ ವಿಷಯ. ನಾವು ಮೂವರು ಒಟ್ಟಿಗೆ ಸಂತೋಷವಾಗಿರಬಹುದು. ನಾವೆಲ್ಲರೂ ವಯಸ್ಕರು. ನಾವೇ ಒಪ್ಪಿ ಸಂತೋಷದಿಂದ ಇದ್ದೇವೆ. ಹಾಗಿದ್ದಮೇಲೆ ಬೇರೆಯವರಿಗೆ ಯಾಕೆ ಸಮಸ್ಯೆ?’ ಎಂದು ಪ್ರಶ್ನಿಸಿದ್ದಾರೆ.