ಶನಿವಾರ, 24 ಅಕ್ಟೋಬರ್ 2026

SBIನಲ್ಲಿ ಕಸ ಗುಡಿಸುತ್ತಿದ್ದ ಮಹಿಳೆ ಈಗ ಅದೇ ಬ್ಯಾಂಕ್‌ನ ಮ್ಯಾನೇಜರ್!!

ಮನುಷ್ಯನ ಬದುಕು ಯಾವಾಗಲೂ ಒಂದೇ ತೆರನಾಗಿ ಇರುವುದಿಲ್ಲ. ಅದು ಯಾವಾಗ ಬದಲಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಎಸ್‌ಬಿಐ ಬ್ಯಾಂಕಿನ ಉದ್ಯೋಗಿಯಾಗಿರುವ ಮಹಿಳೆಯೇ ಇದಕ್ಕೆ ಸ್ಪಷ್ಟ ನಿದರ್ಶನ ಎನ್ನಬಹುದು. ಯಾಕಂದ್ರೆ ಬ್ಯಾಂಕಿನಲ್ಲಿ ಕಸ ಗುಡಿಸುತ್ತಿದ್ದಂತಹ ಈ ಮಹಿಳೆ ಇದೀಗ ಅದೇ ಬ್ಯಾಂಕಿನ ಮ್ಯಾನೇಜರ್ ಆಗಿ ಆಯ್ಕೆಯಾಗಿದ್ದಾಳೆ.

ಹೌದು, ಪುಣೆಯ ಪ್ರತೀಕ್ಷಾ ತೊಂಡ್ವಾಲ್ಕರ್ ಅವರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಕಸ ಗುಡಿಸುವ ಕೆಲಸದಿಂದ ಆರಂಭಿಸಿ, ಇಂದು ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹಾಗಿದ್ದರೆ ಯಾರಿವರು? ಇವರ ಬದುಕಿನ ಕಥೆ ಏನು? ಎಂಬುದನ್ನು ತಿಳಿಯೋಣ.

ಪುಣೆಯಲ್ಲಿ 1964ರಲ್ಲಿ ಜನಿಸಿದ ಪ್ರತೀಕ್ಷಾ ಅವರು ಮನೆಯಲ್ಲಿರುವ ಕಡು ಬಡತನದ ಕಾರಣದಿಂದಾಗಿ ತಮ್ಮ 16ನೇ ವಯಸ್ಸಿನಲ್ಲೇ ಸದಾಶಿವ್ ಕಡು ಅವರೊಂದಿಗೆ ವಿವಾಹವಾದರು. ಸದಾಶಿವ್ ಅವರು ಮುಂಬೈನ ಎಸ್‌ಬಿಐ ಶಾಖೆಯೊಂದರಲ್ಲಿ ಬುಕ್ ಬೈಂಡರ್ ಆಗಿ ಕೆಲಸ ಮಾಡುತ್ತಿದ್ದರು. ವಿವಾಹವಾದ ಒಂದು ವರ್ಷದ ನಂತರ, ತಮ್ಮ ಪುಟ್ಟ ಮಗುವಿನೊಂದಿಗೆ ಊರಿಗೆ ಹೋಗುವಾಗ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಅವರ ಪತಿ ಮೃತಪಟ್ಟರು. ಕೇವಲ 20ನೇ ವಯಸ್ಸಿಗೆ ಪ್ರತೀಕ್ಷಾ ವಿಧವೆಯಾದರು.

ಸರಿಯಾದ ಶಿಕ್ಷಣವಿಲ್ಲ, ಕೈಯಲ್ಲಿ ದುಡ್ಡಿಲ್ಲ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಮಗುವಿನ ಪಾಲನೆಗಾಗಿ ಪ್ರತೀಕ್ಷಾ ಅವರು ತಮ್ಮ ಪತಿ ಕೆಲಸ ಮಾಡುತ್ತಿದ್ದ ಎಸ್‌ಬಿಐ ಬ್ಯಾಂಕ್‌ನಲ್ಲಿ ಕಸ ಗುಡಿಸುವ ಕೆಲಸಕ್ಕೆ ಸೇರಿಕೊಂಡರು.ಇದರಿಂದ ಪ್ರತೀಕ್ಷಾ ಅವರಿಗೆ ತಿಂಗಳಿಗೆ ಕೇವಲ 60 ರಿಂದ 65 ರೂಪಾಯಿ ಸಂಬಳ ಸಿಗುತ್ತಿತ್ತು. ಪ್ರತಿದಿನ ಮುಂಜಾನೆ ಬ್ಯಾಂಕ್‌ನ ಶೌಚಾಲಯ ತೊಳೆಯುವುದು, ಕಸ ಗುಡಿಸುವುದು, ಟೇಬಲ್ ಒರೆಸುವುದೇ ಅವರ ದಿನನಿತ್ಯದ ಕಾಯಕವಾಗಿತ್ತು. 

ತನ್ನ ಬದುಕು ಕೇವಲ ಕಸ ಗುಡಿಸುವುದಕ್ಕೆ ಸೀಮಿತವಾಗಬಾರದು, ಕಚೇರಿಯಲ್ಲಿ ಇತರರು ಕೆಲಸ ಮಾಡುವುದನ್ನ ನೋಡಿ ತಾನೂ ಆ ಹುದ್ದೆಗೇರಬೇಕು ಎಂದು ಪ್ರತೀಕ್ಷಾ ತನ್ನಲ್ಲೇ ನಿರ್ಧರಿಸಿದರು. ಅವರ ಈ ಕನಸಿಗೆ ಬ್ಯಾಂಕ್‌ನ ಸಹೋದ್ಯೋಗಿಗಳು ಒಳ್ಳೇಯ ಬೆಂಬಲ ನೀಡಿದರು. ಪುಸ್ತಕಗಳನ್ನ ಖರೀದಿಸಲು ಹಣ ಸಹಾಯ ಮಾಡಿದರು ಹಾಗೂ ಪರೀಕ್ಷೆ ಬರೆಯಲು ಬ್ಯಾಂಕ್‌ನಿಂದ ಒಂದು ತಿಂಗಳ ರಜೆಯೂ ಸಿಕ್ಕಿತು. ಬಿಡುವಿನ ವೇಳೆಯಲ್ಲಿ ಓದಲು ಆರಂಭಿಸಿದ ಅವರು, ಶೇಕಡಾ 60ರಷ್ಟು ಅಂಕಗಳೊಂದಿಗೆ 10ನೇ ತರಗತಿ ಪಾಸ್ ಮಾಡಿದರು. ಬಳಿಕ ಮುಂಬೈನ ವಿಖ್ರೋಲಿಯಲ್ಲಿರುವ ನೈಟ್ ಕಾಲೇಜಿಗೆ ಸೇರಿಕೊಂಡರು. ಹಗಲಿನಲ್ಲಿ ಕಸ ಗುಡಿಸುವ ಕೆಲಸ ಹಾಗೂ ಇತರ ಸಣ್ಣ-ಪುಟ್ಟ ಕೆಲಸಗಳನ್ನ ಮಾಡುತ್ತಾ, ರಾತ್ರಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದರು. ಹೀಗೆ ಕಷ್ಟಪಟ್ಟು ಓದಿ 12ನೇ ತರಗತಿ ತೇರ್ಗಡೆಯಾದರು.

1995ರಲ್ಲಿ ಸೈಕಾಲಜಿ ವಿಷಯದಲ್ಲಿ ಪದವಿ ಪಡೆದರು. ಪದವಿ ಮುಗಿಯುತ್ತಿದ್ದಂತೆ, ಅವರ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಿತು. ಕಸ ಗುಡಿಸುತ್ತಿದ್ದ ಪ್ರತೀಕ್ಷಾ ತೊಂಡ್ವಾಲ್ಕರ್ ಎಸ್‌ಬಿಐ ಬ್ಯಾಂಕ್‌ನಲ್ಲಿ ಕ್ಲರ್ಕ್ (ಗುಮಾಸ್ತೆ) ಆಗಿ ಭಡ್ತಿ ಪಡೆದರು. ಕ್ಲರ್ಕ್ ಹುದ್ದೆ ಸಿಕ್ಕ ತಕ್ಷಣ ಪ್ರತೀಕ್ಷಾ ಅವರ ಮನಸ್ಸು ಇಷ್ಟಕ್ಕೆ ತೃಪ್ತಿ ಪಟ್ಟುಕೊಳ್ಳಲಿಲ್ಲ, ಅವರ ಗುರಿ ಇನ್ನೂ ದೊಡ್ಡದಾಗಿತ್ತು. 1993ರಲ್ಲಿ ಪ್ರಮೋದ್ ತೊಂಡ್ವಾಲ್ಕರ್ ಎಂಬುವವರನ್ನ ಎರಡನೇ ವಿವಾಹವಾದರು. ಬ್ಯಾಂಕ್ ಮೆಸೆಂಜರ್ ಆಗಿದ್ದ ಪ್ರಮೋದ್ ಅವರು ಪ್ರತೀಕ್ಷಾ ಅವರ ಕನಸುಗಳಿಗೆ ಬೆನ್ನೆಲುಬಾಗಿ ನಿಂತರು ಹಾಗೂ ಬ್ಯಾಂಕಿಂಗ್ ಪರೀಕ್ಷೆಗಳನ್ನ ಬರೆಯಲು ಪ್ರೋತ್ಸಾಹಿಸಿದರು.

ತಮ್ಮ ಕಠಿಣ ಪರಿಶ್ರಮದ ಫಲವಾಗಿ, ಪ್ರತೀಕ್ಷಾ ಬ್ಯಾಂಕಿಂಗ್ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ 2004ರಲ್ಲಿ ಟ್ರೈನಿ ಆಫೀಸರ್ ಆಗಿ ನೇಮಕಗೊಂಡರು. ಅಲ್ಲಿಂದ ಅವರ ವೃತ್ತಿಜೀವನ ಮತ್ತೊಂದು ಮೈಲಿಗಲ್ಲಿಗೆ ತಲುಪಿತು. ತಮ್ಮ ಕೆಲಸದ ಮೇಲಿನ ಶ್ರದ್ಧೆಯಿಂದ ಸ್ಕೇಲ್ 4 ಅಧಿಕಾರಿ, ಡಿಜಿಎಂ, ಸಿಜಿಎಂ ಆಗಿ ಕಾರ್ಯನಿರ್ವಹಿಸಿದ ಅವರು, ಅಂತಿಮವಾಗಿ 2022ರಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ‘ಅಸಿಸ್ಟೆಂಟ್ ಜನರಲ್ ಮ್ಯಾನೇಜರ್’ ಹುದ್ದೆಗೇರಿದರು. ಒಟ್ಟಿನಲ್ಲಿ ಸಾಧಿಸಿದರೆ ಸಬಲವನ್ನು ನುಂಗಬಹುದು ಎಂಬುದನ್ನು ಪ್ರತೀಕ್ಷಾ ಮಾಡಿ ತೋರಿಸಿದ್ದಾರೆ.