ಸೋಮವಾರ, 26 ಅಕ್ಟೋಬರ್ 2026
Trending

ಟ್ರಾಫಿಕ್‌ ದಂಡ ವಸೂಲಿಗೆ ಸುಪ್ರೀಂ ಕೋರ್ಟ್‌ ಮಾಸ್ಟರ್ ಪ್ಲಾನ್ – ಕರೆಂಟ್‌ ಬಿಲ್‌ಗೆ ಚಲನ್‌ ಲಿಂಕ್

ಸಂಚಾರ ನಿಯಮಗಳನ್ನು ಉಲ್ಲಂಘಿಸಿ ದಂಡ ಪಾವತಿಸದೆ ಜಾರಿಕೊಳ್ಳುವ ವಾಹನ ಸವಾರರಿಗೆ ಸುಪ್ರೀಂ ಕೋರ್ಟ್ ಭಾರಿ ಶಾಕ್ ನೀಡಿದ್ದು, ಇನ್ಮುಂದೆ ದಂಡದ ಚಲನ್ ಅನ್ನು ವಿದ್ಯುತ್ ಬಿಲ್ ಜೊತೆಗೆ ಜೋಡಿಸಲು ಹೇಳಿದೆ.

Sponsored

ಹೌದು, ಸಂಚಾರ ನಿಯಮ ಉಲ್ಲಂಘನೆಯ ಬಾಕಿ ಇ-ಚಲನ್ ದಂಡವನ್ನು ವಸೂಲಿ ಮಾಡಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಬಾಕಿ ಚಲನ್‌ಗಳನ್ನು ವಿದ್ಯುತ್ ಬಿಲ್‌ಗಳೊಂದಿಗೆ ಜೋಡಿಸುವ ಸಾಧ್ಯತೆಯನ್ನು ಪರಿಶೀಲಿಸಬೇಕು ಎಂದು ನ್ಯಾಯಮೂರ್ತಿ ಜೆ.ಬಿ. ಪಾರ್ದೀವಾಲಾ ಮತ್ತು ನ್ಯಾಯಮೂರ್ತಿ ಕೆ.ವಿ. ವಿಶ್ವನಾಥನ್ ಅವರಿದ್ದ ಪೀಠವು ಈ ಸಲಹೆಯನ್ನು ಮುಂದಿಟ್ಟಿದೆ.

ಕೇವಲ ಇ-ಚಲನ್‌ಗಳನ್ನು ವಿತರಿಸುವುದು ಸಾಕಾಗುವುದಿಲ್ಲ. ಜನರು ಸಂಚಾರ ದಂಡವನ್ನು ಪಾವತಿಸದಿದ್ದರೆ ಅದನ್ನು ವಿದ್ಯುತ್ ಬಾಕಿ ಬಿಲ್‌ಗೆ ಸೇರಿಸಿ. ಅವರು ವಿದ್ಯುತ್ ಬಿಲ್ ಪಾವತಿಸಲೇಬೇಕಾಗುತ್ತದೆ. ಇಲ್ಲದಿದ್ದರೆ ವಿದ್ಯುತ್ ಸಂಪರ್ಕ ಕಡಿತಗೊಳ್ಳುತ್ತದೆ. ಸಂಚಾರ ನಿಯಮ ದಂಡದ ವಸೂಲಿಗೊಂದು ದಾರಿಯನ್ನು ಕಂಡುಕೊಳ್ಳಲೇಬೇಕು ಎಂದು ಪೀಠ ಹೇಳಿದೆ.

ವಿಚಾರಣೆ ವೇಳೆ, ದೇಶದ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸುಮಾರು 45,000 ಕೋಟಿ ರೂಪಾಯಿ ಮೌಲ್ಯದ ಇ-ಚಲನ್ ದಂಡದ ಮೊತ್ತ ಬಾಕಿ ಉಳಿದಿದೆ. ಈ ಪೈಕಿ ಇದುವರೆಗೆ ಕೇವಲ 25,000 ಕೋಟಿ ರೂಪಾಯಿ ಮಾತ್ರ ವಸೂಲಿಯಾಗಿದೆ ಎಂದು ‘ಬಾರ್ ಆಂಡ್ ಬೆಂಚ್’ ವರದಿ ಮಾಡಿದೆ.

ಕರೆಂಟ್ ಕಟ್, ವಾಹನ ಜಪ್ತಿ ಹಾಗೂ ಹಲವು ಕಠಿಣ ಕ್ರಮಗಳು

ದಂಡ ವಸೂಲಿ ಪ್ರಕ್ರಿಯೆಯನ್ನು ಪರಿಣಾಮಕಾರಿಗೊಳಿಸಲು ನ್ಯಾಯಮೂರ್ತಿ ಪರ್ದಿವಾಲಾ ಅವರು, “ಸಂಚಾರ ದಂಡವನ್ನು ನಿಗದಿತ ಅವಧಿಯಲ್ಲಿ ಪಾವತಿಸದಿದ್ದಲ್ಲಿ ಅಂತಹ ಸವಾರರ ಮನೆ ಅಥವಾ ವಾಣಿಜ್ಯ ಮಳಿಗೆಗಳ ವಿದ್ಯುತ್ ಸಂಪರ್ಕವನ್ನೇ ಕಡಿತಗೊಳಿಸುವ ಕ್ರಮ ಕೈಗೊಳ್ಳುವ ಬಗ್ಗೆ ಪ್ರಾಧಿಕಾರಗಳು ಯೋಚಿಸಬಹುದು” ಎಂದು ಸುಳಿವು ನೀಡಿದ್ದಾರೆ. ಇದರ ಜೊತೆಗೆ, ರಸ್ತೆಗಳಲ್ಲಿ ದಿಢೀರ್ ವಾಹನ ತಪಾಸಣೆ ನಡೆಸಿ, ಬಾಕಿ ಇ-ಚಲನ್‌ಗಳನ್ನು ಹೊಂದಿರುವ ವಾಹನಗಳನ್ನು ತಕ್ಷಣವೇ ಜಪ್ತಿ ಮಾಡಬಹುದು ಎಂದು ಪೀಠವು ಚರ್ಚಿಸಿದೆ.