ಕಾಲೇಜು ವಿದ್ಯಾರ್ಥಿನಿ ಒಬ್ಬಳು ತನ್ನ ಪ್ರೀತಿಯನ್ನು ನಿರಾಕರಿಸುತ್ತಿದ್ದಾಳೆ, ತನ್ನಿಂದ ದೂರ ಆಗುತ್ತಿದ್ದಾಳೆ ಎಂದು ಉಪನ್ಯಾಸಕನೊಬ್ಬ ಆಕೆಗೆ ಬಲವಂತವಾಗಿ ಕೀಟನಾಶಕ ಕುಡಿಸಿ ಕೊಂಡ ಆಘಾತಕಾರಿ ಘಟನೆ ಎಂದು ತೆಲಂಗಾಣದಲ್ಲಿ ಬೆಳಕಿಗೆ ಬಂದಿದೆ.
ಮೃತ ಯುವತಿಯನ್ನು 20 ವರ್ಷದ ತಂದ್ರಾ ಅಕ್ಷಿತಾರಾಣಿ ಎಂದು ಗುರುತಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಸಿಂಗರೇಣಿ ಕಾಲರೀಸ್ ಪಾಲಿಟೆಕ್ನಿಕ್ ಕಾಲೇಜಿನ ಹೊರಗುತ್ತಿಗೆ ಉಪನ್ಯಾಸಕ ನವೀನ್ ಕುಮಾರ್ (38) ಹಾಗೂ ಸಿಂಗರೇಣಿಯ ಮತ್ತೊಬ್ಬ ಉದ್ಯೋಗಿ ರವಿ ಕುಮಾರ್ (35) ಅವರನ್ನು ಪೊಲೀಸರು ಬಂಧಿಸಿದ್ದಾರೆ. ಯುವತಿಯ ಸಾವಿನ ಬಳಿಕ ಡೆತ್ ನೋಟ್ ಪತ್ತೆಯಾಗಿದ್ದು ಆರಂಭದಲ್ಲಿ ಇದನ್ನು ಆತ್ಮಹತ್ಯೆ ಎನ್ನಲಾಗಿತ್ತು. ಆದರೆ ತನಿಖೆ ಕೈಗೊಂಡ ಪೊಲೀಸ್ರಿಗೆ ಈ ಪ್ರಕರಣ ನಾಟಕೀಯ ತಿರುಗು ಪಡೆದುಕೊಂಡಿದ್ದು ರೋಚಕ ವಿಚಾರಗಳು ಬಯಲಾಗಿದೆ.
ಏನಿದು ಘಟನೆ?
ಅಕ್ಷಿತಾರಾಣಿ ಡಿಪ್ಲೊಮಾ ಓದುತ್ತಿದ್ದಾಗ ನಸ್ಪುರದ ಸಿಂಗರೇಣಿ ಕಾಲರೀಸ್ ಪಾಲಿಟೆಕ್ನಿಕ್ನ ಉಪನ್ಯಾಸಕ ನವೀನ್ ಕುಮಾರ್ ಪರಿಚಯವಾಗಿದ್ದ. ಬಳಿಕ ಆಕೆ ಮೈನಿಂಗ್ ಎಂಜಿನಿಯರಿಂಗ್ ಓದಲು ಹೈದರಾಬಾದ್ಗೆ ತೆರಳಿ, ಸಿಂಗರೇಣಿ ಗಣಿಯಲ್ಲಿ ಅಪ್ರೆಂಟಿಸ್ಶಿಪ್ ಮಾಡುತ್ತಿದ್ದ ವೇಳೆ ರವಿ ಕುಮಾರ್ ಎಂಬಾತನ ಪರಿಚಯವಾಗಿತ್ತು.
ಈ ವೇಳೆ ಅಕ್ಷಿತಾರಾಣಿ ನವೀನ್ನಿಂದ ದೂರವಾಗಿ ರವಿ ಕುಮಾರ್ಗೆ ಹತ್ತಿರವಾಗಲು ತೊಡಗಿದ್ದಳು. ತನ್ನಿಂದ ದೂರವಾಗಿ ರವಿ ಕುಮಾರ್ ಜೊತೆ ಸಂಬಂಧ ಬೆಳೆಸಿದ್ದನ್ನು ಸಹಿಸಲಾಗದ ಉಪನ್ಯಾಸಕ ಸೆಪ್ಟೆಂಬರ್ 12 ರಂದು ಅಕ್ಷಿತಾರಾಣಿ ಮನೆಗೆ ಹಿಂತಿರುಗುತ್ತಿದ್ದಾಗ ಎಫ್ಸಿಐ ಕ್ರಾಸ್ರೋಡ್ಸ್ ಬಳಿ ಕಾರಿನಲ್ಲಿ ಬಂದು ಆಕೆಯನ್ನು ಅಡ್ಡಗಟ್ಟಿದ ನವೀನ್, ಬಲವಂತವಾಗಿ ಕಾರಿನಲ್ಲಿ ಕರೆದೊಯ್ದಿದ್ದಾನೆ. ಬಳಿಕ ರವಿ ಕುಮಾರ್ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆತನ ವಿರುದ್ಧ ಡೆತ್ನೋಟ್ ಬರೆಯುವಂತೆ ಬೆದರಿಸಿ, ಬಲವಂತವಾಗಿ ಕೀಟನಾಶಕ ಕುಡಿಸಿದ್ದಾನೆ. ಆಕೆ ನರಳಾಡುತ್ತಿದ್ದರೂ ತಕ್ಷಣ ಆಸ್ಪತ್ರೆಗೆ ಕರೆದೊಯ್ಯದೆ ಚಿಕಿತ್ಸೆ ವಿಳಂಬ ಮಾಡಿದ್ದಲ್ಲದೆ, ಆಕೆಯ ಮೊಬೈಲ್ನಿಂದ ತಂದೆಗೆ ಕರೆ ಮಾಡಿ ‘ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ’ ಎಂದು ನಂಬಿಸಲು ಯತ್ನಿಸಿದ್ದ.
ಸೆಪ್ಟೆಂಬರ್ 12 ರಂದು ಗೋದಾವರಿಖನಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದ ಅಕ್ಷಿತಾರಾಣಿ ಚಿಕಿತ್ಸೆ ಫಲಿಸದೇ ಮರುದಿನ ಸಾವನ್ನಪ್ಪಿದ್ದರು. ಪ್ರಾರಂಭದಲ್ಲಿ ಇದನ್ನೊಂದು ಸಾಮಾನ್ಯ ಆತ್ಮಹತ್ಯೆ ಪ್ರಕರಣವೆಂದು ಭಾವಿಸಲಾಗಿತ್ತು. ಆದರೆ ತನಿಖೆ ನಡೆಸಿದ ಪೊಲೀಸರಿಗೆ ಸಿಸಿಟಿವಿ ದೃಶ್ಯಾವಳಿಗಳು, ಕಾಲ್ ರೆಕಾರ್ಡಿಂಗ್ಗಳು ಹಾಗೂ ತಾಂತ್ರಿಕ ಸಾಕ್ಷ್ಯಗಳು ಘಟನೆಯ ನಿಜ ಬಣ್ಣವನ್ನು ಬಯಲು ಮಾಡಿದೆ. ನವೀನ್ ಕುಮಾರ್ ಯೋಜನಾಬದ್ಧವಾಗಿ ಈ ಕೃತ್ಯ ಎಸಗಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 20 ರಂದು ಆತನನ್ನು ಹಾಗೂ ರವಿ ಕುಮಾರ್ನನ್ನು ದಸ್ತಗಿರಿ ಮಾಡಲಾಗಿದೆ. ಕೃತ್ಯಕ್ಕೆ ಬಳಸಿದ ಕಾರು ಹಾಗೂ ಮೊಬೈಲ್ಗಳನ್ನು ಜಪ್ತಿ ಮಾಡಲಾಗಿದೆ. ಅಕ್ಷಿತಾರಾಣಿ ಬರೆದಿಟ್ಟಿದ್ದ ಡೆತ್ನೋಟ್ನಲ್ಲಿ ರವಿ ಕುಮಾರ್ ವಿರುದ್ಧ ಬಲವಂತದ ದೈಹಿಕ ಸಂಬಂಧದ ಆರೋಪವಿದ್ದ ಕಾರಣ ಆತನ ವಿರುದ್ಧವೂ ಪ್ರತ್ಯೇಕ ತನಿಖೆ ನಡೆಯುತ್ತಿದೆ.



