ಶನಿವಾರ, 24 ಅಕ್ಟೋಬರ್ 2026

ಉಡುಪಿ ಮೂಲದ ವ್ಯಕ್ತಿ ಕೊಲೆ ಕೇಸ್​- ಪೋಸ್ಟ್‌ಮಾರ್ಟಮ್ ವರದಿಯಲ್ಲಿ ಬೆಚ್ಚಿಬೀಳಿಸುವ ಅಂಶ ಬಹಿರಂಗ

ದುಬೈನ ಶಾರ್ಜಾದಲ್ಲಿ ಉಡುಪಿ ಮೂಲದ ಅಲ್ವಿನ್ ಪ್ರಕಾಶ್ ಕುಂದರ್ ಅವರನ್ನು ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಇದೀಗ ಮರಣೋತ್ತರ ಪರೀಕ್ಷೆಯಲ್ಲಿ ಕೊಲೆಯ ಕುರಿತು ಶಾಕಿಂಗ್ ಸತ್ಯ ಒಂದು ಬಯಲಾಗಿದೆ.

ಪೋಸ್ಟ್‌ಮಾರ್ಟಮ್ ವರದಿಯಲ್ಲಿ ಬೆಳಕಿಗೆ ಬಂದಿದೆ. ಅವರ ದೇಹವನ್ನು ಒಂಬತ್ತು ಭಾಗಗಳಾಗಿ ತುಂಡರಿಸಿರುವ ಬಗ್ಗೆ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಮೃತ ದೇಹದ ಎಡ ಎದೆ ಭಾಗದಲ್ಲಿ ಎರಡು ಚುಚ್ಚಿದ ಗಾಯಗಳಿವೆ. ಏಳನೇ ಮತ್ತು ಎಂಟನೇ ಪಕ್ಕೆಲುಬುಗಳ ನಡುವಿನಿಂದ ಚುಚ್ಚಲಾಗಿದೆ. ಹಸಿರು ಮತ್ತು ನೀಲಿ ಚೀಲಗಳಲ್ಲಿ ತಲೆ, ಕೈಕಾಲುಗಳು ಹಾಗೂ ಇತರೆ ದೇಹದ ಅಂಗಾಂಗಗಳನ್ನು ಪ್ರತ್ಯೇಕಿಸಲಾಗಿತ್ತು. ಎಲುಬುಗಳನ್ನು ಹರಿತವಾದ ಮಾರಕಾಸ್ತ್ರದಿಂದ ಕತ್ತರಿಸಲಾಗಿತ್ತು. ಮೃದು ಅಂಗಾಂಶಗಳನ್ನು ಕತ್ತರಿಸಿ ಎಲುಬುಗಳನ್ನು ಬೇರ್ಪಡಿಸಿರುವುದು ಗೊತ್ತಾಗಿದೆ. ಇಷ್ಟೊಂದು ಅಮಾನವೀಯವಾಗಿ ಕೊಲೆ ಮಾಡಲು ಸಾಧ್ಯವೇ ಎನ್ನುವುದು ಆತಂಕ ಹುಟ್ಟಿಸಿದೆ.

ಪತ್ನಿ ಹಾಗೂ ಪುತ್ರ ಭಾರತಕ್ಕೆ ಬಂದಿರುವುದು ಪತ್ತೆ 

ಪ್ರಕರಣಕ್ಕೆ ಸಂಬಂಧಿಸಿದಂತೆ ಅನೇಕ ಅಂಶಗಳು ಬೆಳಕಿಗೆ ಬರುತ್ತಿವೆ. ಸಿಸಿ ಕ್ಯಾಮೆರಾದಲ್ಲಿ ಓರ್ವ ಮಹಿಳೆ ಹಾಗೂ ಇಬ್ಬರು ಪುರುಷರು ಶವವನ್ನು ಸಾಗಿಸುತ್ತಿರುವಂತೆ ಕಂಡುಬಂದಿರುವ ದೃಶ್ಯ ಶಾರ್ಜಾ ಪೊಲೀಸರಿಗೆ ಲಭ್ಯವಾಗಿದೆ. ಇನ್ನೊಂದೆಡೆ ಘಟನೆ ನಂತರ ಪತ್ನಿ ಹಾಗೂ ಪುತ್ರ ಭಾರತಕ್ಕೆ ಬಂದಿರುವುದು ದೆಹಲಿ ವಿಮಾನ ನಿಲ್ದಾಣದಿಂದ ಗೊತ್ತಾಗಿದೆ. ಆ ನಂತರದ ಅವರ ಚಲನವಲನದ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಕಾಣೆಯಾಗಿರುವ ಇವರಿಬ್ಬರನ್ನು ಪತ್ತೆ ಮಾಡಿ, ಕೊಲೆಯಲ್ಲಿ ಅವರು ಭಾಗಿಯಾಗಿದ್ದಾರಾ ಇಲ್ಲಾ ಎನ್ನುವುದನ್ನು ಪತ್ತೆ ಹಚ್ಚುವಂತೆ ಕುಟುಂಬ ಒತ್ತಾಯಿಸಿದೆ.