ಶನಿವಾರ, 24 ಅಕ್ಟೋಬರ್ 2026

ಸರ್ಕಾರ 3ಕಂಡಿಷನ್ಸ್‌ಗೆ ಒಪ್ಪಿದ್ರೆ ಆಮರಣ ಉಪವಾಸ ಕೈಬಿಡಲು ರೆಡಿ ಎಂದ ಸೋನಮ್‌ ವಾಂಗ್ಚುಕ್‌!

ದೇಶದಲ್ಲಿ ಶೈಕ್ಷಣಿಕ ವ್ಯವಸ್ಥೆಯಲ್ಲಿ ಸುಧಾರಣೆ ಹಾಗೂ ಇತ್ತೀಚೆಗೆ ನಡೆದ ನೀಟ್‌ ಯುಜಿ-2026 ಮೊದಲ ಪರೀಕ್ಷೆಯಲ್ಲಿ ನಡೆದ ಪ್ರಶ್ನೆ ಪತ್ರಿಕೆಸೋರಿಕೆ ವಿಚಾರಕ್ಕೆ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಪದಚ್ಯುತಿಗೆ ಆಗ್ರಹಿಸಿ ಜೂ.28ರಿಂದ ಸೋನಮ್‌ ವಾಂಗ್ಚುಕ್‌ ಅವರು ಆಮರಣ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಆದರೆ ಈ ವೇಳೆ ಇದೀಗ ಅವರು ಸರ್ಕಾರ 3ಕಂಡಿಷನ್ಸ್‌ಗೆ ಒಪ್ಪಿದ್ರೆ ಆಮರಣ ಉಪವಾಸ ಕೈಬಿಡಲು ರೆಡಿ ಎಂದಿದ್ದಾರೆ.

ಸೋನಮ್‌ ವಾಂಗ್ಚುಕ್‌ರನ್ನು ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಇದನ್ನು ಅಕ್ರಮ ಬಂಧನ ಎಂದು ಕರೆದಿರುವ ಸಂಸತ್‌ ಚಲೋ ಹೋರಾಟಕ್ಕೆ ರೆಡಿಯಾಗಿದ್ದಾರೆ. ಈ ನಡುವೆ 3 ಬೇಡಿಕೆಗಳನ್ನು ಸರ್ಕಾರ ಹಾಗೂ ನಾಯಕರು ಈಡೇರಿಸುವ ಭರವಸೆಯನ್ನು ನೀಡಿದರೇ ತಮ್ಮ 22 ದಿನಗಳ ಉಪವಾಸ ಕೈಬಿಡಲು ಸಿದ್ದ ಎಂದು ತಮ್ಮ ಅಧಿಕೃತ X ಖಾತೆಯಲ್ಲಿ ಕೈಬರಹದಲ್ಲಿ ಬರೆದಿರುವ ಬೇಡಿಕೆಗಳ ಪೋಸ್ಟ್‌ ಅನ್ನು ಸೋಮವಾರ(ಜು.20ರಂದು) ಹಂಚಿಕೊಂಡಿದ್ದಾರೆ. ಈ ಮೂಲಕ ಕೊನೆಗೂ 22ದಿನಗಳ ಬಳಿಕ ಜುಲೈ 20ರಂದು ತಮ್ಮ ಉಪವಾಸ ಕೈಬಿಡುವ ಸುಳಿವು ನೀಡಿದ್ದಾರೆ.

ಈ ಪೋಸ್ಟ್‌ನಲ್ಲಿ “ನಾನು ಯಾವಾಗ ಉಪವಾಸ ಕೊನೆಗೊಳಿಸುತ್ತೇನೆ…. ಎಂದು ನನ್ನನ್ನು ಹಲವರು ಕೇಳಿದ್ದಾರೆ. ನನ್ನ ಆರೋಗ್ಯದ ಸಮಸ್ಯೆ ಇದ್ದರೂ, ಜುಲೈ20ರಂದು ಸಂಸತ್ ಚಲೋ ಪ್ರತಿಭಟನೆ ಮುಗಿಯುವವರೆಗೂ ನನ್ನ ಉಪವಾಸ ಮುಂದುವರಿಯುತ್ತದೆ ಮತ್ತು ಈ ಕೆಳಗಿನ ಸಂದರ್ಭಗಳಲ್ಲಿ ಮಾತ್ರ ಅದನ್ನು ಕೊನೆಗೊಳಿಸಲಾಗುತ್ತದೆ..” ಎಂದು ಕೈಬರಹದ ಪತ್ರವನ್ನು ಹಂಚಿಕೊಂಡಿದ್ದಾರೆ.

ಸೋನಮ್‌ ವಾಂಗ್ಚುಕ್‌ ಅವರ 3 ಷರತ್ತುಗಳೇನು?

1. ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್) ಪ್ರಶ್ನೆಪತ್ರಿಕೆ ಸೋರಿಕೆ ವಿವಾದಕ್ಕೆ ಸರ್ಕಾರವು ಜವಾಬ್ದಾರಿಯನ್ನು ತೆಗೆದುಕೊಳ್ಳುವ ಕುರಿತಂತೆ ಶಿಕ್ಷಣ ವ್ಯವಸ್ಥೆಯಲ್ಲಿನ ಇತ್ತೀಚಿನ ವೈಫಲ್ಯಗಳು, ಪ್ರಶ್ನೆಪತ್ರಿಕೆ ಸೋರಿಕೆ ಇತ್ಯಾದಿಗಳಿಗೆ ಸರ್ಕಾರ ಹೊಣೆಗಾರಿಕೆಯನ್ನು ತೆಗೆದುಕೊಂಡಲ್ಲಿ.

2. CJP ನಾಯಕತ್ವ ಹಾಗೂ ಸೋನಮ್‌ ವಾಂಗ್ಚುಕ್ ಇಂದು ಸಂಸತ್ತಿನ ಮನೆ ಬಾಗಿಲಿಗೆ ತಲುಪುವಲ್ಲಿ ಯಶಸ್ವಿಯಾಗಿ, ಅಲ್ಲಿ ಸಂಸದರು ಮತ್ತು ವಿವಿಧ ಪಕ್ಷಗಳ ನಾಯಕರು ಸಂಸತ್ತಿನಲ್ಲಿ ಈ ವಿಷಯವನ್ನು ಎತ್ತುವುದಾಗಿ ನಮಗೆ ಭರವಸೆ ನೀಡುವುದಾದರೆ.

3. ಒಂದು ವೇಳೆ ನನ್ನ ಆರೋಗ್ಯ ಅಥವಾ ಇತರ ಅಂಶಗಳು ಇದಕ್ಕೆ ಅವಕಾಶ ನೀಡದಿದ್ದರೆ (ಸಂಸತ್‌ ಚಲೋ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು) ವಿವಿಧ ಪಕ್ಷಗಳ ಸಂಸದರು ಮತ್ತು ನಾಯಕರು ಈ ಆಸ್ಪತ್ರೆಗೆ ಭೇಟಿ ನೀಡಿ ಈ ಮೇಲಿನ ವಿಚಾರಗಳಿಗೆ ಭರವಸೆ ನೀಡಿದರೆ ಉಪವಾಸವನ್ನು ಕೈಬಿಡುವುದಾಗಿ ತಿಳಿಸಿದ್ದಾರೆ.

ಹೀಗೆ ಈ ಷರತ್ತುಗಳನ್ನು ಬರೆದಿರುವ ಸೋನಮ್‌ ವಾಂಗ್ಚುಕ್‌ ತನ್ನನ್ನು ದೆಹಲಿ ಪೊಲೀಸರು ಸಫ್ದರ್ಜಂಗ್ ಆಸ್ಪತ್ರೆಯಲ್ಲಿ ಅಕ್ರಮವಾಗಿ ಬಂಧಿಸಿದ್ದಾರೆ ಎಂದು ಆರೋಪಿಸಿದ್ದು, ” ನನ್ನನ್ನು ಅಕ್ರಮವಾಗಿ ಬಂಧಿಸಿ, ನನ್ನ ನನ್ನ ಚಲನೆ, ವಾಕ್ ಮತ್ತು ಸಂವಹನ ಸ್ವಾತಂತ್ರ್ಯವನ್ನು ನಿರ್ಬಂಧಿಸಲಾಗಿರುವ ಸಫ್ದರ್ಜಂಗ್ ಆಸ್ಪತ್ರೆಯಿಂದ ಈ ಪತ್ರ ಬರೆಯುತ್ತಿದ್ದೇನೆ” ಎಂದು ಪೋಸ್ಟ್‌ ಮಾಡಿದ್ದಾರೆ.