ಭಾನುವಾರ, 25 ಅಕ್ಟೋಬರ್ 2026
Trending

ಅನುದಾನಕ್ಕಾಗಿ ರಕ್ತದಲ್ಲೇ ಪತ್ರ ಬರೆದ ಶಿಕ್ಷಕ: ಸಚಿವ ಮಧು ಬಂಗಾರಪ್ಪಗೆ ವಿನೂತನ ಮನವಿ

ಶಿವಮೊಗ್ಗ: 1995ರ ನಂತರ ಆರಂಭಗೊಂಡ ಕನ್ನಡ ಮಾಧ್ಯಮ ಶಾಲೆಗಳಿಗೆ ಸರ್ಕಾರದಿಂದ ವೇತನಾನುದಾನ ನೀಡಬೇಕು ಎಂದು ಆಗ್ರಹಿಸಿ ಶಿಕಾರಿಪುರದ ಶಿಕ್ಷಕರೊಬ್ಬರು ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಶಿಕ್ಷಕ ಪ್ರಶಾಂತ್ ಸಿರೆಂಜೆ ಅವರು ತಮ್ಮ ರಕ್ತದಲ್ಲೇ ಪತ್ರ ಬರೆದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಅವರಿಗೆ ಮನವಿ ಸಲ್ಲಿಸಿದ್ದಾರೆ. ಅನುದಾನವಿಲ್ಲದೆ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರು ಹಾಗೂ ಸಿಬ್ಬಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರ ಕೂಡಲೇ ವೇತನಾನುದಾನ ಬಿಡುಗಡೆ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ತಮ್ಮ ಪ್ರತಿಭಟನೆಗೆ ಕಾರಣ ವಿವರಿಸಿದ ಪ್ರಶಾಂತ್, ಸಚಿವ ಮಧು ಬಂಗಾರಪ್ಪ ಅವರು ಈ ಹಿಂದೆ ‘ನನ್ನ ರಕ್ತದಲ್ಲೇ ಕನ್ನಡವಿದೆ’ ಎಂದು ಹೇಳಿದ್ದನ್ನು ನೆನಪಿಸಿಕೊಂಡಿದ್ದಾರೆ. ಹೀಗಾಗಿ ಸಚಿವರಿಗೆ ತಮ್ಮ ರಕ್ತದಲ್ಲೇ ಪತ್ರ ಬರೆದು ಕನ್ನಡ ಶಾಲೆಗಳ ಪರಿಸ್ಥಿತಿಯನ್ನು ಗಮನ ಸೆಳೆಯಲು ಪ್ರಯತ್ನಿಸಿದ್ದೇನೆ ಎಂದು ತಿಳಿಸಿದ್ದಾರೆ.
ಅನುದಾನವಿಲ್ಲದೆ ಕನ್ನಡ ಮಾಧ್ಯಮ ಶಾಲೆಗಳು ರಕ್ತಹೀನತೆಯಿಂದ ಬಳಲುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಅವರು, ಸರ್ಕಾರ ತಮ್ಮ ಬೇಡಿಕೆಗೆ ಸ್ಪಂದಿಸದಿದ್ದರೆ ನವೆಂಬರ್ 1ರಂದು ಮತ್ತಷ್ಟು ಕನ್ನಡ ಮಾಧ್ಯಮ ಶಾಲೆಗಳ ಶಿಕ್ಷಕರು ಇದೇ ರೀತಿಯಲ್ಲಿ ರಕ್ತದಲ್ಲಿ ಪತ್ರ ಬರೆದು ಪ್ರತಿಭಟನೆ ನಡೆಸಲಿದ್ದಾರೆ ಎಂದು ಎಚ್ಚರಿಕೆ ನೀಡಿದ್ದಾರೆ.

Sponsored