ಶನಿವಾರ, 24 ಅಕ್ಟೋಬರ್ 2026

ಪಾಂಡೇಶ್ವರ ಲೆವೆಲ್‌ ಕ್ರಾಸಿಂಗ್‌ ರಸ್ತೆ ಚತುಷ್ಪಥ ಅಭಿವೃದ್ಧಿಗೆ ರೈಲ್ವೆ ಇಲಾಖೆ ಒಪ್ಪಿಗೆ: ಸಂಸದ ಚೌಟ

ಮಂಗಳೂರು: ನಗರದಲ್ಲಿ ಟ್ರಾಫಿಕ್‌ ಸಮಸ್ಯೆಯನ್ನು ನಿವಾರಿಸಲು ಪಾಂಡೇಶ್ವರ ಲೆವೆಲ್‌ ಕ್ರಾಸಿಂಗ್‌ ಭಾಗವನ್ನು ಚತುಷ್ಪಥವಾಗಿ ಅಭಿವೃದ್ಧಿ ಮಾಡಲು ದಕ್ಷಿಣ ರೈಲ್ವೆಯಿಂದ ಅನುಮೋದನೆ ದೊರಕಿದೆ ಎಂದು ಸಂಸದ ಕ್ಯಾ.ಬ್ರಿಜೇಶ್‌ ಚೌಟ ಅವರ ಕಚೇರಿ ತಿಳಿಸಿದೆ.

ಈ ಕುರಿತು ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿರುವ ಸಂಸದರ ಕಚೇರಿ, ಪಾಂಡೇಶ್ವರ ಲೆವೆಲ್‌ ಕ್ರಾಸಿಂಗ್‌ನಲ್ಲಿ ಉಂಟಾಗಿರುವ ಗಂಭೀರ ಟ್ರಾಫಿಕ್‌ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕೆಂದು ಈ ಭಾಗದ ಜನರ ಬಹು ವರ್ಷಗಳ ಬೇಡಿಕೆ. ಇದರ ಗಂಭೀರತೆಯನ್ನು ಅರಿತು ಸಂಸದ ಕ್ಯಾ.ಬ್ರಿಜೇಶ್‌ ಚೌಟ ಅವರು, ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶಾಸಕ ವೇದವ್ಯಾಸ ಕಾಮತ್‌ ಹಾಗೂ ಜಿಲ್ಲಾಧಿಕಾರಿ ದರ್ಶನ್‌ ಎಚ್.ವಿ. ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ರೈಲ್ವೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆಯನ್ನು ನೀಡಿದ್ದರು.

ದಕ್ಷಿಣ ರೈಲ್ವೆ ವ್ಯಾಪ್ತಿಗೆ ಸೇರಿರುವ ಪಾಂಡೇಶ್ವರ ಲೆವೆಲ್‌ ಕ್ರಾಸಿಂಗ್‌ ರಸ್ತೆಯನ್ನು ನಾಲ್ಕು ಪಥಗಳ ರಸ್ತೆಯಾಗಿ ಅಭಿವೃದ್ಧಿ ಪಡಿಸುವುದಕ್ಕೆ ರೈಲ್ವೆ ಇಲಾಖೆ ಒಪ್ಪಿಗೆ ನೀಡಿದೆ. ಲೆವೆಲ್‌ ಕ್ರಾಸಿಂಗ್‌ ರಸ್ತೆ ಅಗಲೀಕರಣಕ್ಕೆ ಅಂದಾಜು ಪಟ್ಟಿ ಸಿದ್ಧಪಡಿಸಲಾಗುತ್ತದೆ. ಮಾರ್ಚ್‌ ಅಂತ್ಯದೊಳಗೆ ಪಾಂಡೇಶ್ವರ ಲೆವಲ್‌ ಕ್ರಾಸಿಂಗ್‌ ರಸ್ತೆ ಅಗಲೀಕರಣ ಕಾಮಗಾರಿಗೆ ಟೆಂಡರ್‌ ಪ್ರಕ್ರಿಯೆ ನಡೆಯಲಿದೆ. ಇಲ್ಲಿ ಮನಪಾ ವ್ಯಾಪ್ತಿಗೆ ಸಂಬಂಧಪಟ್ಟ ಚತುಷ್ಪಥ ರಸ್ತೆ ಇದ್ದು, ರೈಲ್ವೆ ವ್ಯಾಪ್ತಿಯ ರಸ್ತೆ ಮಾತ್ರ ದ್ವಿಪಥವಾಗಿದೆ. ಇಲ್ಲಿ ಅಗಲೀಕರಣಗೊಂಡರೆ ಲೆವೆಲ್‌ ಕ್ರಾಸಿಂಗ್‌ ರಸ್ತೆ ಕೂಡಾ ಚತುಷ್ಪಥ ರಸ್ತೆಯಾಗಿ ವಾಹನ ಸುಗಮ ಸಂಚಾರ ಅನುಕೂಲವಾಗುತ್ತದೆ. ಇದರ ಜೊತೆಗೆ ಡಬಲ್‌ ಬೂಮ್‌ ಆಟೋಮ್ಯಾಟಿಕ್‌ ಗೇಟ್‌ ವ್ಯವಸ್ಥೆಯನ್ನು ಅಳವಡಿಸಲಾಗುತ್ತಿದೆ. ಇದರಿಂದ ಸುಗಮ ಸಂಚಾರದ ಜೊತೆಗೆ ಟ್ರಾಫಿಕ್‌ ದಟ್ಟಣೆ ಸಮಸ್ಯೆ ಕೂಡಾ ಬಗೆಹರಿಯಲಿದೆ ಎಂದು ಸಂಸದರ ಕಚೇರಿ ತಿಳಿಸಿರುವ ಕುರಿತು ವರದಿಯಾಗಿದೆ.