ಶನಿವಾರ, 24 ಅಕ್ಟೋಬರ್ 2026

MRPL ಸ್ಫೋಟದ ಬಳಿಕ ಮತ್ತೆ ಚರ್ಚೆಯಲ್ಲಿ ನೆಲ್ಲಿದಡಿ ಗುತ್ತು: ಏನಿದು ಕಾಂತೇರಿ ಜುಮಾದಿ ದೈವದ ಕಾರ್ಣಿಕದ ಕಥೆ?

ಮಂಗಳೂರು: ಮಂಗಳೂರು ರಿಫೈನರಿ ಅಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್‌ (MRPL) ಆವರಣದಲ್ಲಿ ಸಂಭವಿಸಿದ ಭಾರಿ ಸ್ಫೋಟ ಮತ್ತು ಅಗ್ನಿ ಅವಘಡದ ಬಳಿಕ ಕರಾವಳಿಯಲ್ಲಿ ಹಲವು ಚರ್ಚೆಗಳು ಆರಂಭವಾಗಿವೆ. ಇದರ ನಡುವೆ ಬಜಪೆ ಸಮೀಪದ ನೆಲ್ಲಿದಡಿ ಗುತ್ತುವಿನ ‘ಕಾಂತೇರಿ ಜುಮಾದಿ’ ದೈವದ ನುಡಿ ಹಾಗೂ MRPL ವ್ಯಾಪ್ತಿಯಲ್ಲಿನ ಬೆಳವಣಿಗೆಗಳ ನಡುವೆ ಸಂಬಂಧವಿದೆಯೇ ಎಂಬ ವಿಚಾರವೂ ಸ್ಥಳೀಯ ವಲಯದಲ್ಲಿ ಚರ್ಚೆಗೆ ಬಂದಿದೆ.
ತುಳುನಾಡಿನ ದೈವಾರಾಧನಾ ಪರಂಪರೆಯಲ್ಲಿ ವಿಶೇಷ ಸ್ಥಾನ ಹೊಂದಿರುವ ನೆಲ್ಲಿದಡಿ ಗುತ್ತು ಸುಮಾರು 800 ವರ್ಷಗಳ ಇತಿಹಾಸ ಹೊಂದಿದೆ ಎನ್ನಲಾಗುತ್ತದೆ. ದೈವದ ನುಡಿ, ಕಾರ್ಣಿಕ ಹಾಗೂ ಆರಾಧನಾ ಸಂಪ್ರದಾಯಗಳಿಗೆ ಈ ಕ್ಷೇತ್ರ ಹೆಸರುವಾಸಿಯಾಗಿದೆ ಎಂದು ಸ್ಥಳೀಯರು ಹೇಳುತ್ತಾರೆ.
ಭೂಸ್ವಾಧೀನದ ವೇಳೆ ಎದುರಾದ ವಿವಾದ
2006ರಲ್ಲಿ ಮಂಗಳೂರು ವಿಶೇಷ ಆರ್ಥಿಕ ವಲಯ (MSEZ) ಕೈಗಾರಿಕಾ ಪ್ರದೇಶದ ಅಭಿವೃದ್ಧಿಗಾಗಿ ಬಜಪೆ, ಬಾಳ, ಕುತ್ತೆತ್ತೂರು, ಪೆರ್ಮುದೆ ಮತ್ತು ಕಳವಾರು ಸೇರಿದಂತೆ ಹಲವು ಗ್ರಾಮಗಳ ಭೂಮಿಯನ್ನು ಸರ್ಕಾರದ ಮೂಲಕ ಸ್ವಾಧೀನಪಡಿಸಿಕೊಳ್ಳಲಾಯಿತು. ಈ ಪ್ರಕ್ರಿಯೆಯಲ್ಲಿ ಕೃಷಿ ಭೂಮಿ, ಮನೆಗಳು ಹಾಗೂ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಸ್ಥಳಗಳು ಕೈಗಾರಿಕಾ ಯೋಜನೆಯ ವ್ಯಾಪ್ತಿಗೆ ಬಂದವು.
ಈ ಸಂದರ್ಭದಲ್ಲಿ ನೆಲ್ಲಿದಡಿ ಗುತ್ತುವಿನ ಕಾಂತೇರಿ ಜುಮಾದಿ ದೈವಸ್ಥಾನವೂ ಯೋಜನಾ ವ್ಯಾಪ್ತಿಯಲ್ಲಿತ್ತು ಎನ್ನಲಾಗುತ್ತದೆ. ಆದರೆ ದೈವಸ್ಥಾನದ ಸ್ಥಳವನ್ನು ತೆರವುಗೊಳಿಸುವ ವಿಚಾರದಲ್ಲಿ ಸ್ಥಳೀಯರಿಂದ ವಿರೋಧ ವ್ಯಕ್ತವಾಗಿತ್ತು.
ಸ್ಥಳೀಯರ ಪ್ರಕಾರ, ದೈವಾರಾಧನೆಗೆ ಸಂಬಂಧಿಸಿದ ವಿಚಾರದಲ್ಲಿ ಅಧಿಕಾರಿಗಳಿಂದ ತಡೆ ಎದುರಾದ ಸಂದರ್ಭದಲ್ಲಿ ಕಾಂತೇರಿ ಜುಮಾದಿ ದೈವವು ತನ್ನ ಸ್ಥಾನವನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂಬ ಸಂದೇಶ ನೀಡಿತ್ತು. “ಸ್ಥಳವನ್ನು ಕೆಡವಿದರೆ ಬೆಂಕಿ ಸುರಿಸುತ್ತೇನೆ. ನನ್ನ ಮಣ್ಣನ್ನು ಉಳಿಸಿಕೊಳ್ಳಲು ನನಗೆ ಗೊತ್ತಿದೆ. ಒಂದು ವರ್ಷದೊಳಗೆ ತೀರ್ಮಾನ ನೀಡುತ್ತೇನೆ” ಎಂಬ ನುಡಿ ದೈವದಿಂದ ಬಂದಿತ್ತು ಎಂದು ದೈವಾರಾಧಕರು ಹೇಳುತ್ತಾರೆ.
2016ರಲ್ಲೂ ತೆರವು ಪ್ರಯತ್ನ
2016ರಲ್ಲಿ ದೈವಸ್ಥಾನವಿದ್ದ ಸ್ಥಳವನ್ನು ತೆರವುಗೊಳಿಸಲು ಮತ್ತೊಮ್ಮೆ ಪ್ರಯತ್ನ ನಡೆದಿತ್ತು ಎನ್ನಲಾಗುತ್ತದೆ. ಆದರೆ ಅದು ಕಾರ್ಯರೂಪಕ್ಕೆ ಬರಲಿಲ್ಲ. ಬಳಿಕ ಜಿಲ್ಲಾಡಳಿತ ಮಧ್ಯಪ್ರವೇಶಿಸಿ ದೈವಸ್ಥಾನದ ಸ್ಥಳವನ್ನು ಸ್ಮಾರಕದ ರೀತಿಯಲ್ಲಿ ಸಂರಕ್ಷಿಸುವುದರ ಜೊತೆಗೆ ಪೂಜಾ-ಪುನಸ್ಕಾರಗಳಿಗೆ ಅವಕಾಶ ಕಲ್ಪಿಸಿತ್ತು ಎಂದು ಸ್ಥಳೀಯರು ವಿವರಿಸುತ್ತಾರೆ.
ಇದೀಗ MRPL ಆವರಣದಲ್ಲಿ ನಡೆದಿರುವ ಅಗ್ನಿ ಅವಘಡದ ಹಿನ್ನೆಲೆಯಲ್ಲಿ ಹಲವು ವರ್ಷಗಳ ಹಿಂದಿನ ಈ ಘಟನೆಗಳು ಮತ್ತೆ ಮುನ್ನೆಲೆಗೆ ಬಂದಿವೆ.
ದೈವ ನುಡಿ ಮತ್ತು ಸ್ಫೋಟಕ್ಕೆ ಸಂಬಂಧವಿದೆಯೇ?
MRPL ಸ್ಫೋಟಕ್ಕೆ ವೈಜ್ಞಾನಿಕ ಹಾಗೂ ತಾಂತ್ರಿಕ ಕಾರಣಗಳ ಬಗ್ಗೆ ತನಿಖೆ ನಡೆಯಬೇಕಿರುವ ನಡುವೆಯೇ, ಸ್ಥಳೀಯ ದೈವಾರಾಧಕರು ಮಾತ್ರ ಹಳೆಯ ದೈವ ನುಡಿಯನ್ನು ನೆನಪಿಸಿಕೊಳ್ಳುತ್ತಿದ್ದಾರೆ. ದೈವದ ನುಡಿಗೂ ಇತ್ತೀಚಿನ ಘಟನೆಗೂ ಸಂಬಂಧವಿದೆ ಎಂಬುದು ಸ್ಥಳೀಯರ ನಂಬಿಕೆ ಮಾತ್ರವಾಗಿದ್ದು, ಇದನ್ನು ದೃಢಪಡಿಸುವ ಯಾವುದೇ ಅಧಿಕೃತ ಮಾಹಿತಿ ಸದ್ಯಕ್ಕೆ ಲಭ್ಯವಿಲ್ಲ.
ಘಟನೆಯ ನಿಖರ ಕಾರಣ ತನಿಖೆಯಿಂದ ಹೊರಬರಬೇಕಿದೆ. ಆದರೆ MRPL ಅವಘಡದ ಬೆನ್ನಲ್ಲೇ ನೆಲ್ಲಿದಡಿ ಗುತ್ತು ಮತ್ತು ಕಾಂತೇರಿ ಜುಮಾದಿ ದೈವದ ಹಿಂದಿನ ನುಡಿ ಮತ್ತೊಮ್ಮೆ ಕರಾವಳಿಯ ಜನರ ಗಮನ ಸೆಳೆದಿರುವುದು ಮಾತ್ರ ಗಮನಾರ್ಹವಾಗಿದೆ.