ಈ ವರ್ಷ ಪ್ರಪ್ರಥಮ ಬಾರಿಗೆ ಮೈಸೂರು ದಸರಾದಲ್ಲಿ ಕರಾವಳಿಯ ಸಾಂಪ್ರದಾಯಿಕ ಕ್ರೀಡೆಯಾದ ಕಂಬಳವನ್ನು ಆ ಯೋಜನೆ ಮಾಡಲಾಗುತ್ತಿದೆ. ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರ ನೇತೃತ್ವ ಹಾಗೂ ಮುತುವರ್ಜಿಯಿಂದ ಈ ಕ್ರೀಡೆಯನ್ನು ಆಯೋಜಿಸಲಾಗುತ್ತಿದೆ. ಆದರೆ ಈ ಕಂಬಳ ಆಯೋಜನೆಗೆ ಮೈಸೂರು ಸಂಸದ ಹಾಗೂ ಮೈಸೂರು ರಾಜ ಯದುವೀರ್ ಒಡೆಯರ್ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
Sponsoredಕೆಲ ದಿನಗಳ ಹಿಂದಷ್ಟೇ ಇದನ್ನು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರು ವಿರೋಧ ಮಾಡಿದ್ದರು. ಈ ಬಗ್ಗೆ ಶಾಸಕ ಅಶೋಕ್ ಕುಮಾರ್ ಅವರು ಮಾಧ್ಯಮಗಳ ಜೊತೆ ಮಾತನಾಡಿ ಉತ್ತರ ನೀಡಿದ್ದರು. ಆದರೆ ಇದರ ಬೆನ್ನಲ್ಲೇ ಮೈಸೂರು ಸಂಸದ ಯದುವೀರ್ ಒಡೆಯರ್ ಅವರು ದಸರಾದಲ್ಲಿ ಕಂಬಳ ಆಯೋಜನೆಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ‘ಮೂಲ ನೆಲದಿಂದ ಕಂಬಳವನ್ನು ಬೇರ್ಪಡಿಸಿ ಕರಾವಳಿಯ ಮಣ್ಣಿನ ಸಂಸ್ಕೃತಿಯ ಪಾವಿತ್ರ್ಯಕ್ಕೆ ಧಕ್ಕೆ ತರಬೇಡಿ’ ಎಂದು ಸಲಹೆ ನೀಡಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್’ (ಟ್ವಿಟರ್) ನಲ್ಲಿ ಪೋಸ್ಟ್ ಮಾಡಿರುವ ಸಂಸದ ಯದುವೀರ್, ಕಂಬಳದ ಸಾಂಪ್ರದಾಯಿಕ ಮತ್ತು ಧಾರ್ಮಿಕ ಹಿನ್ನೆಲೆಯನ್ನು ಉಳಿಸಿಕೊಳ್ಳುವ ಅಗತ್ಯತೆಯನ್ನು ಪ್ರತಿಪಾದಿಸಿದ್ದಾರೆ.ಮೈಸೂರು ದಸರಾ ಮಹೋತ್ಸವದಲ್ಲಿ ಕಂಬಳವನ್ನು ಅಳವಡಿಸಿಕೊಳ್ಳುವ ಕುರಿತು ನಡೆಯುತ್ತಿರುವ ಚರ್ಚೆಗಳು ಅತ್ಯಂತ ಆಳವಾದ ಮರುಚಿಂತನೆಯನ್ನು ಬೇಡುತ್ತವೆ. ಕಂಬಳವು ಕರಾವಳಿ ಕರ್ನಾಟಕದ ಮಣ್ಣು, ಸಂಸ್ಕೃತಿ ಮತ್ತು ಜನಜೀವನದೊಂದಿಗೆ ಹಾಸುಹೊಕ್ಕಾಗಿರುವ ಶತಮಾನಗಳ ಇತಿಹಾಸವಿರುವ ಅತ್ಯಂತ ಪವಿತ್ರವಾದ ಪರಂಪರೆ. ಇದು ತನ್ನದೇ ಆದ ಆಳವಾದ ಸಾಂಪ್ರದಾಯಿಕ ಮತ್ತು ಧಾರ್ಮಿಕ ಮೌಲ್ಯವನ್ನು ಹೊಂದಿದ್ದು, ಇದನ್ನು ಕೇವಲ ವಾಣಿಜ್ಯೀಕರಣ ಅಥವಾ ಮನರಂಜನೆಯ ದೃಷ್ಟಿಕೋನದಿಂದ ನೋಡಿ ಇದರ ಘನತೆಯನ್ನು ಕುಂದಿಸಬಾರದು.
ನಿರ್ದಿಷ್ಟ ಪರಿಸರ ಮತ್ತು ಪ್ರಾದೇಶಿಕ ನಂಬಿಕೆಗೆ ಸೀಮಿತವಾಗಿರುವ ಇಂತಹ ವಿಶಿಷ್ಟ ಆಚರಣೆಯನ್ನು ಅದರ ಮೂಲ ನೆಲದಿಂದ ಬೇರ್ಪಡಿಸುವುದು ಅದರ ಆಂತರಿಕ ಪವಿತ್ರತೆಗೆ ಧಕ್ಕೆ ತರುವ ಅಪಾಯವನ್ನು ಹೊಂದಿರುತ್ತದೆ. ಇದೇ ಸಂದರ್ಭದಲ್ಲಿ, ನಮ್ಮ ತಕ್ಷಣದ ಮತ್ತು ಸಾಮೂಹಿಕ ಗಮನವು ಮೈಸೂರು ದಸರಾದ ಮೂಲ ಸ್ವರೂಪವನ್ನು ಮತ್ತಷ್ಟು ಬಲಪಡಿಸುವುದರ ಕಡೆಗೆ ಇರಬೇಕಾಗಿದೆ. ಪ್ರಸ್ತುತ ದಸರಾ ಮಹೋತ್ಸವದ ಸಂಘಟನೆಯಲ್ಲಿ ಇನ್ನೂ ಹಲವು ಆಡಳಿತಾತ್ಮಕ ಲೋಪದೋಷಗಳು, ಮೂಲಸೌಕರ್ಯಗಳ ಕೊರತೆ ಹಾಗೂ ವ್ಯವಸ್ಥಿತ ಸವಾಲುಗಳು ಎದುರಾಗುತ್ತಿವೆ. ಸರ್ಕಾರ ಮತ್ತು ದಸರಾ ಉನ್ನತ ಮಟ್ಟದ ಸಮಿತಿಯು ಮೊದಲು ಈ ಆಂತರಿಕ ಸವಾಲುಗಳನ್ನು ಬಗೆಹರಿಸಲು ಹೆಚ್ಚಿನ ಆದ್ಯತೆ ನೀಡಬೇಕಾಗಿದೆ ಎಂದಿದ್ದಾರೆ.




