ಇಸ್ರೊಗೆ 120ಕ್ಕೂ ಹೆಚ್ಚು ವಿಜ್ಞಾನಿಗಳು ರಾಜೀನಾಮೆ!!
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಲ್ಲಿ (ಇಸ್ರೊ) 120ಕ್ಕೂ ಹೆಚ್ಚು ಹಿರಿಯ ವಿಜ್ಞಾನಿಗಳು ಹಾಗೂ ತಾಂತ್ರಿಕ ತಜ್ಞರು ರಾಜೀನಾಮೆ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ.
Sponsoredಹೌದು, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಲ್ಲಿ(ಇಸ್ರೋ) 120ಕ್ಕೂ ಹೆಚ್ಚು ಹಿರಿಯ ವಿಜ್ಞಾನಿಗಳು ಹಾಗೂ ತಾಂತ್ರಿಕ ತಜ್ಞರು ರಾಜೀನಾಮೆ ಸಲ್ಲಿಸಿದ್ದಾರೆ ಎನ್ನಲಾಗಿದೆ. ಕಳೆದ ಒಂದು ವರ್ಷದಲ್ಲಿ ಒಟ್ಟು 120ಕ್ಕೂ ಹೆಚ್ಚು ತಜ್ಞರು ರಾಜೀನಾಮೆ ನೀಡಿದ್ದು, ಇದರಲ್ಲಿ ಚಂದ್ರಯಾನ -3 ಹಾಗೂ ಸ್ಪೇಡೆಕ್ಸ್ ಯೋಜನೆಗಳ ಪ್ರಮುಖ ವಿಜ್ಞಾನಿಗಳು ಸೇರಿರುವುದು ಕಳವಳಕ್ಕೆ ಕಾರಣವಾಗಿದೆ.
ಈ ರಾಜಿನಾಮೆಯ ಹಿಂದಿನ ಕಾರಣವೇನೆಂದು ನೋಡಿದಾಗ ದೇಶದಲ್ಲಿ ಖಾಸಗಿ ವಲಯದ ಬಾಹ್ಯಾಕಾಶ ಯೋಜನೆಗಳು ಹೆಚ್ಚಾಗುತ್ತಿದ್ದು. ಅಲ್ಲಿ ಉತ್ತಮ ಸಂಬಳ ಹಾಗೂ ಹುದ್ದೆಯ ಸ್ಥಾನಮಾನದ ಆಕಾಂಕ್ಷೆಯಿಂದ ಇಸ್ರೋ ತೊರೆದು ಖಾಸಗಿ ವಲಯಕ್ಕೆ ಸೇರ್ಪಡೆಯಾಗುತ್ತಿದ್ದಾರೆ ಎನ್ನಲಾಗಿದೆ.
ಇಸ್ರೊದ ಪ್ರಮುಖ ಕೇಂದ್ರಗಳಾದ ಬೆಂಗಳೂರಿನ ‘ಯು.ಆರ್. ರಾವ್ ಉಪಗ್ರಹ ಕೇಂದ್ರ’ದಿಂದ (ಯುಆರ್ಎಸ್ಸಿ) ಸುಮಾರು 80 ಹಾಗೂ ತಿರುವನಂತಪುರದ ವಿಕ್ರಂ ಸಾರಾಭಾಯ್ ಬಾಹ್ಯಾಕಾಶ ಕೇಂದ್ರದಿಂದ (ವಿಎಸ್ಎಸ್ಸಿ) ಕನಿಷ್ಠ 20 ಹಿರಿಯ ವಿಜ್ಞಾನಿಗಳು ರಾಜೀನಾಮೆ ನೀಡಿದ್ದಾರೆ ಎಂದು ವರದಿ ಹೇಳಿದೆ.
ಸರಣಿ ರಾಜೀನಾಮೆಯು ಇಸ್ರೋದ ಮಹತ್ವಾಕಾಂಕ್ಷೆಯ ಯೋಜನೆಗಳ ಹಿನ್ನಡೆಗೆ ಕಾರಣವಾಗಬಹುದು. ಅಲ್ಲದೆ ದೇಶದ ಕೋಟ್ಯಾಂತರ ರೂಪಾಯಿ ವೆಚ್ಚದ ಯೋಜನೆಗಳು ವಿಳಂಬವಾಗಿ ಮತ್ತಷ್ಟು ಖರ್ಚು ಹೆಚ್ಚಾಗುವ ಅಪಾಯ ಇದೆ. ಈ ಬೆಳವಣಿಗೆಯ ಬಳಿಕ ಬಾಹ್ಯಾಕಾಶ ಕೇಂದ್ರವು ರಾಜೀನಾಮೆ ನಿಯಮವನ್ನು ಮತ್ತಷ್ಟು ವೈಜ್ಞಾನಿಕಗೊಳಿಸಿದೆ. ಭಾರತೀಯ ಬಾಹ್ಯಾಕಾಶ ಇಲಾಖೆ ತುರ್ತು ಕ್ರಮ ಕೈಗೊಂಡಿದ್ದು, ಜುಲೈ 14 ರಂದು ಆಂತರಿಕ ಜ್ಞಾಪನಾ ಪತ್ರದ (Memorandum) ಲ್ಲಿ ವಿಜ್ಞಾನಿಗಳ ಸ್ವಯಂ ನಿವೃತ್ತಿ ಮತ್ತು ರಾಜೀನಾಮೆ ನಿಯಮಗಳನ್ನು ಕಟ್ಟುನಿಟ್ಟಿಗೊಳಿಸಲಾಗಿದೆ.




