ಶನಿವಾರ, 24 ಅಕ್ಟೋಬರ್ 2026

ಜೈಲಿನಲ್ಲಿ ಪ್ರಜ್ವಲ್ ರೇವಣ್ಣ ಬಳಿ ಮೊಬೈಲ್ ಪತ್ತೆ!!

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ  ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಬಳಿ ಮೊಬೈಲ್ ಫೋನ್ ಪತ್ತೆಯಾಗಿದೆ.

ಮಂಗಳವಾರ ಮಧ್ಯಾಹ್ನ ಸಿಸಿಬಿ ಪೊಲೀಸರು ಪರಪ್ಪನ ಅಗ್ರಹಾರ ಜೈಲು ಸಂಕೀರ್ಣದ ಮೇಲೆ ದಿಢೀರ್ ಪರಿಶೀಲನೆ ನಡೆಸಿದಾಗ, ಶಿಕ್ಷೆ ಅನುಭವಿಸುತ್ತಿರುವ ಪ್ರಜ್ವಲ್ ರೇವಣ್ಣ ಬ್ಯಾರಕ್‌ನಲ್ಲಿ ಕೀ ಪ್ಯಾಡ್‌ ಮೊಬೈಲ್‌ ಪತ್ತೆಯಾಗಿದೆ. ಜೈಲಿನಲ್ಲಿ ವಿಐಪಿ ಸೌಲಭ್ಯ ನೀಡಲಾಗುತ್ತಿದೆ ಎಂಬ ಆರೋಪಕ್ಕೆ ಮತ್ತೆ ಪುಷ್ಟಿ ನೀಡಿದೆ.

ಜೈಲಿನೊಳಗೆ ನಿಷೇಧಿತ ಮೊಬೈಲ್ ಸಾಧನ ಹೇಗೆ ತಲುಪಿತು ಎಂಬುದರ ಕುರಿತು ಸಮಗ್ರ ತನಿಖೆ ನಡೆಸಲು ಪೊಲೀಸರು ನಿರ್ಧರಿಸಿದ್ದು, ಸಂಬಂಧಪಟ್ಟ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅತ್ಯಂತ ಬಿಗಿ ಭದ್ರತೆ ಹೊಂದಿರುವ ಕೇಂದ್ರ ಕಾರಾಗೃಹದಲ್ಲಿ ಹೈಪ್ರೊಫೈಲ್ ಕೈದಿಯೊಬ್ಬರ ಬಳಿ ಮೊಬೈಲ್ ಫೋನ್ ಪತ್ತೆಯಾಗಿರುವುದು ಕಾರಾಗೃಹದ ಭದ್ರತಾ ವ್ಯವಸ್ಥೆಯ ಮೇಲೆಯೇ ಸಾಲು ಸಾಲು ಪ್ರಶ್ನೆಗಳನ್ನು ಎತ್ತಿದೆ.