ಶನಿವಾರ, 24 ಅಕ್ಟೋಬರ್ 2026

ಶಿವಗಂಗೆಯಲ್ಲಿ ಉದ್ಯಮಿ ಪುತ್ರ ನಾಪತ್ತೆ ಕೇಸ್​​ಗೆ ಬಿಗ್ ಟ್ವಿಸ್ಟ್​- ರೀಲ್ಸ್ ಮಾಡ್ತಿದ್ದ ಯುವತಿ ನೋಡಿದ್ದೇನು?

ಬೆಂಗಳೂರಿನ ಉದ್ಯಮಿಯ ಪುತ್ರ ಅದ್ವೈತ್ ಉಪಾಧ್ಯಾಯ ಕೆಲ ದಿನಗಳ ಹಿಂದೆ ತಾಲೂಕಿನ ಶಿವಗಂಗೆ ಬೆಟ್ಟಕ್ಕೆ ಚಾರಣಕ್ಕೆ ತೆರಳಿ ನಿಗೂಢವಾಗಿ ನಾಪತ್ತೆಯಾಗಿದ್ದಾರೆ. ಬೆಟ್ಟದ ಮೇಲಾಸನಕ್ಕೆ ತೆರಳಿದವರ ಸುಳಿವು ಸಿಗದೆ, ಪೊಲೀಸರು ಡ್ರೋನ್ ಕ್ಯಾಮೆರಾ ಬಳಸಿ ತೀವ್ರ ಶೋಧ ಕಾರ್ಯ ನಡೆಸುತ್ತಿದ್ದಾರೆ. ಈ ಕೇಸ್ ಕೇಸ್​ ಇದೀಗ ದಿನಕ್ಕೊಂದು ತಿರುವು ಪಡೆದುಕೊಳ್ತಿದೆ.

ಇಂದು ಚಿತ್ರದುರ್ಗದ ಕೋತಿರಾಜ್ ಮತ್ತು ತಂಡವನ್ನು ಕರೆಸಲು ಪೊಲೀಸರು ತಯಾರಿ ನಡೆಸಿದ್ದಾರೆ. ಇದರ ನಡುವೆಯೇ ಶಿವಗಂಗೆ ಬೆಟ್ಟದ ಮೇಲೆ ರೀಲ್ಸ್‌ ಮಾಡ್ತಿದ್ದ ಓರ್ವ ಯುವತಿ ಪೊಲೀಸರಿಗೆ ಮಾಹಿತಿ ನೀಡಿದ್ದು,ಭಾನುವಾರ ಬೆಳಗ್ಗೆ 7:23ಕ್ಕೆ ಶಾಂತಲಾ ಡ್ರಾಪ್ ತುತ್ತ ತುದಿಯಲ್ಲಿ ಅದ್ವೈತ್ ಮಲಗಿದ್ದ ಎಂದು ಪೊಲೀಸರಿಗೆ ತಿಳಿಸಿದ್ದಾರೆ. ತನ್ನ ಸ್ನೇಹಿತರು ರೀಲ್ಸ್ ಮಾಡುವ ವೇಳೆ ಹುಡುಗಿ ಅದ್ವೈತ್​​ನನ್ನು ನೋಡಿರೋದಾಗಿ ಹೇಳಿಕೊಂಡಿದ್ದಾಳೆ. ಶಿವಗಂಗೆಯಿಂದ ಕುದೂರುವರೆಗೂ ಮೊಬೈಲ್ ಟ್ರಾಕಿಂಗ್ ಟವರ್ ಟ್ರೇಸ್ ಮಾಡಲಾಗಿದೆ. 

ಪೊಲೀಸರು ಅದ್ವೈತ್ ಅವರ ಕಾಡುಗೋಡಿಯ ಮನೆಯಲ್ಲಿ ಪರಿಶೀಲನೆ ನಡೆಸಿದಾಗ ಅವರ ಲ್ಯಾಪ್‌ ಟಾಪ್ ಪತ್ತೆಯಾಗಿದೆ. ಲ್ಯಾಪ್‌ ಟಾಪ್ ತಪಾಸಣೆ ನಡೆಸಿದ ವೇಳೆ ಬೆಚ್ಚಿಬೀಳಿಸುವ ಅಂಶಗಳು ಬೆಳಕಿಗೆ ಬಂದಿವೆ. AI ತಂತ್ರಜ್ಞಾನವನ್ನು ಬಳಸಿ ಶಿವಗಂಗೆಯ ಶಾಂತಲಾ ಡ್ರಾಪ್‌ ನಿಂದ ಬಿದ್ದರೆ ಎಷ್ಟೊತ್ತಿಗೆ ಸಾಯಬಹುದು ಎಂದು ಅದ್ವೈತ್​ ಹುಡುಕಾಟ ನಡೆಸಿದ್ದರು ಎನ್ನಲಾಗಿದೆ. ಇದಕ್ಕೆ ಎಐ ಬೆಳಗ್ಗೆ 7:30 ಕ್ಕೆ ಬಿದ್ದರೆ ಸಾವು ಸಂಭವಿಸಬಹುದು ಎಂದು ಉತ್ತರ ನೀಡಿತ್ತು. ಈ ಕಾರಣಕ್ಕೆ ಆ.4 ರಂದೇ ಶಿವಗಂಗೆ ಬೆಟ್ಟದ ಶಾಂತಲಾ ಡ್ರಾಪ್ ಬಳಿಗೆ ಅದ್ವೈತ್ ಬಂದಿರೋ ಶಂಕೆ ಕೂಡ ಇದೆ. ಒಟ್ಟಾರೆ ಶೋಧ ಕಾರ್ಯ ಮುಂದುವರಿದಿದೆ.