Home » ತನ್ನ ಕೂದಲನ್ನೇ ಕಿತ್ತು ತಿನ್ನೋ MBBS ವಿದ್ಯಾರ್ಥಿನಿ – ಹೊಟ್ಟೆ ಆಪರೇಷನ್ ಮಾಡಿ 1.2 ಕೆಜಿ ಕೂದಲು ಹೊರತೆಗೆದ ವೈದ್ಯರು!!

ತನ್ನ ಕೂದಲನ್ನೇ ಕಿತ್ತು ತಿನ್ನೋ MBBS ವಿದ್ಯಾರ್ಥಿನಿ – ಹೊಟ್ಟೆ ಆಪರೇಷನ್ ಮಾಡಿ 1.2 ಕೆಜಿ ಕೂದಲು ಹೊರತೆಗೆದ ವೈದ್ಯರು!!

0 comments

ದೆಹಲಿಯ ದ್ವಾರಕಾದಲ್ಲಿರುವ ಮಣಿಪಾಲ್ ಆಸ್ಪತ್ರೆಯ ವೈದ್ಯರು ಅಪರೂಪದ ಶಸ್ತ್ರಚಿಕಿತ್ಸೆ ನಡೆಸಿ 20 ವರ್ಷದ ವಿದ್ಯಾರ್ಥಿನಿಯೊಬ್ಬಳ ಹೊಟ್ಟೆಯಿಂದ ಸುಮಾರು 1.16 ಕೆಜಿ ತೂಕದ ಬೃಹತ್ ಕೂದಲಿನ ಉಂಡೆಯನ್ನು ಹೊರತೆಗೆದಿದ್ದಾರೆ. ಈ ಘಟನೆಯು ವೈದ್ಯಕೀಯ ಲೋಕವನ್ನೇ ಬೆರಗುಗೊಳಿಸಿದೆ.

ಎಂಬಿಬಿಎಸ್ ವ್ಯಾಸಂಗ ಮಾಡುತ್ತಿರುವ ಯುವತಿ, ಕಳೆದ 11 ವರ್ಷಗಳಿಂದ ಯಾರಿಗೂ ತಿಳಿಯದಂತೆ ತನ್ನ ಕೂದಲನ್ನೇ ತಾನು ತಿನ್ನುವ ಅಭ್ಯಾಸ ರೂಢಿಸಿಕೊಂಡಿದ್ದಳು. ಇತ್ತೀಚಿನ ದಿನಗಳಲ್ಲಿ ಆಕೆಗೆ ಹೊಟ್ಟೆಯಲ್ಲಿ ಅಸಹನೀಯ ನೋವು ಕಾಣಿಸಿಕೊಂಡಿತ್ತು. ತೀವ್ರ ನಿಶ್ಯಕ್ತಿ, ಹಸಿವಾಗದಿರುವುದು, ತೂಕ ಇಳಿಕೆ ಹಾಗೂ ಸತತ ವಾಂತಿಯಿಂದ ನರಳುತ್ತಿದ್ದ ಆಕೆಯನ್ನು ಪೋಷಕರು ಆಸ್ಪತ್ರೆಗೆ ದಾಖಲಿಸಿದ್ದರು. ತಪಾಸಣೆ ನಡೆಸಿದಾಗ ಜಠರದಲ್ಲಿ ದೊಡ್ಡ ಗಡ್ಡೆಯಂತಹ ರಚನೆ ಪತ್ತೆಯಾಗಿತ್ತು.

ಎಂಡೋಸ್ಕೋಪಿ ಪರೀಕ್ಷೆ ನಡೆಸಿದಾಗ ವೈದ್ಯರಿಗೇ ಆಘಾತ ಕಾದಿತ್ತು. ಜಠರದಲ್ಲಿ ಕೂದಲು ಹೆಣೆದುಕೊಂಡು ಉಂಡೆಯಾಗಿರುವುದು ಕಂಡುಬಂದಿದೆ. ವೈದ್ಯಕೀಯ ಭಾಷೆಯಲ್ಲಿ ಇದನ್ನು ‘ಟ್ರೈಕೊಬೆಜೋರ್’ ಎಂದು ಕರೆಯಲಾಗುತ್ತದೆ. ಮಾನವನ ಜೀರ್ಣಾಂಗ ವ್ಯವಸ್ಥೆಗೆ ಕೂದಲನ್ನು ಕರಗಿಸುವ ಶಕ್ತಿ ಇರುವುದಿಲ್ಲ. ಯುವತಿ ವರ್ಷಾನುಗಟ್ಟಲೆ ತಿಂದಿದ್ದ ಕೂದಲು ಜೀರ್ಣವಾಗದೆ ಆಹಾರದೊಂದಿಗೆ ಬೆರೆತು ‘ಜೆ’ ಆಕಾರದ ಬೃಹತ್ ರಾಶಿಯಾಗಿ ಮಾರ್ಪಟ್ಟಿತ್ತು. ಇದು ಆಹಾರ ನಳಿಕೆಯ ತುದಿಯಿಂದ ಹಿಡಿದು ಸಣ್ಣ ಕರುಳಿನ ಪ್ರವೇಶದ್ವಾರದವರೆಗೂ ಹರಡಿಕೊಂಡು ಹೊಟ್ಟೆ ಊದಿಕೊಳ್ಳಲು ಕಾರಣವಾಗಿತ್ತು ಎಂದು ತಜ್ಞ ವೈದ್ಯ ಡಾ. ಸಂದೀಪ್ ಅಗರ್ವಾಲ್ ತಿಳಿಸಿದ್ದಾರೆ.

ಲ್ಯಾಪರೊಸ್ಕೋಪಿಕ್ ಮೂಲಕ ಸಫಲ ಆಪರೇಷನ್

ಮೊದಲು ಎಂಡೋಸ್ಕೋಪಿ ಮೂಲಕವೇ ಕೂದಲನ್ನು ಹೊರತೆಗೆಯಲು ವೈದ್ಯರು ಯತ್ನಿಸಿದ್ದರು. ಆದರೆ ಕೂದಲಿನ ಮುದ್ದೆ ಗಾತ್ರದಲ್ಲಿ ತೀರಾ ದೊಡ್ಡದಾಗಿದ್ದರಿಂದ ಹಾಗೂ ಹೊಟ್ಟೆಯ ಒಳಪದರ ಹರಿದುಹೋಗುವ ಅಪಾಯವಿದ್ದ ಕಾರಣ ಆ ಪ್ರಯತ್ನ ಕೈಬಿಡಲಾಯಿತು. ಬಳಿಕ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆಗೆ ಮೊರೆಹೋದ ವೈದ್ಯರ ತಂಡ, ಕಿಬ್ಬೊಟ್ಟೆಯ ಭಾಗದಲ್ಲಿ ಸಣ್ಣ ರಂಧ್ರಗಳನ್ನು ಕೊರೆದು ಹೊಟ್ಟೆಯಲ್ಲಿದ್ದ 1.2 ಕೆಜಿ ಕೂದಲನ್ನು ಸುರಕ್ಷಿತವಾಗಿ ಹೊರತೆಗೆದಿದೆ.

ಏನಿದು ಕಾಯಿಲೆ?

ವ್ಯಕ್ತಿಯು ಪದೇ ಪದೇ ತನ್ನ ಕೂದಲನ್ನು ತಾನೇ ತಿನ್ನುವ ಅಭ್ಯಾಸವನ್ನು ವೈದ್ಯಕೀಯ ಭಾಷೆಯಲ್ಲಿ ‘ಟ್ರೈಕೊಫೇಜಿಯಾ’ ಎನ್ನಲಾಗುತ್ತದೆ. ಇದೊಂದು ಮಾನಸಿಕ ಒತ್ತಡ ಅಥವಾ ಅಸ್ವಸ್ಥತೆಯ ಲಕ್ಷಣವಾಗಿದೆ. ಹೊಟ್ಟೆಯಲ್ಲಿ ಶೇಖರಣೆಯಾದ ಕೂದಲಿನ ಗಟ್ಟಿಯಾದ ಉಂಡೆಯನ್ನು ‘ಟ್ರೈಕೊಬೆಜೋವರ್’ ಎಂದು ಕರೆಯಲಾಗುತ್ತದೆ. ಕೂದಲು ಮಾನವನ ಜೀರ್ಣಾಂಗವ್ಯೂಹದಲ್ಲಿ ಕರಗುವುದಿಲ್ಲ. ಹೀಗಾಗಿ ಇಂತಹ ಅಭ್ಯಾಸವಿದ್ದರೆ ಅದು ಪ್ರಾಣಾಪಾಯಕ್ಕೆ ಕಾರಣವಾಗಬಹುದು ಎಂದು ವೈದ್ಯರು ಎಚ್ಚರಿಸಿದ್ದಾರೆ. ಸದ್ಯ ಯುವತಿ ಶಸ್ತ್ರಚಿಕಿತ್ಸೆಯ ನಂತರ ಚೇತರಿಸಿಕೊಳ್ಳುತ್ತಿದ್ದಾಳೆ

You may also like