Home » ಜಡ್ಜ್ ಗೆ ಬೆದರಿಕೆ ಹಾಕಿದ ಲಾಯರ್ – 1,000 ಹಣ್ಣಿನ ಗಿಡ ನೆಡುವ ಶಿಕ್ಷೆ ವಿಧಿಸಿದ ಹೈಕೋರ್ಟ್!

ಜಡ್ಜ್ ಗೆ ಬೆದರಿಕೆ ಹಾಕಿದ ಲಾಯರ್ – 1,000 ಹಣ್ಣಿನ ಗಿಡ ನೆಡುವ ಶಿಕ್ಷೆ ವಿಧಿಸಿದ ಹೈಕೋರ್ಟ್!

0 comments

ಕಲಾಪದ ವೇಳೆ ನ್ಯಾಯಾಧೀಶರಿಗೇ ಬೆದರಿಕೆಯೊಡ್ಡಿದ್ದ ವಕೀಲರೊಬ್ಬರಿಗೆ ಪ್ರಾಯಶ್ಚಿತ್ತವಾಗಿ 1,000 ಹಣ್ಣಿನ ಗಿಡಗಳನ್ನು ನೆಟ್ಟು ಪೋಷಿಸುವಂತೆ ಕರ್ನಾಟಕ ಹೈಕೋರ್ಟ್ ವಿನೂತನ ಆದೇಶ ನೀಡಿದೆ.

ಏನಿದು ಪ್ರಕರಣ?

ಕೊಪ್ಪಳ ಜಿಲ್ಲೆಯ ಗಂಗಾವತಿ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಕೊಲೆ ಪ್ರಕರಣವೊಂದರ ವಿಚಾರಣೆ ನಡೆಯುತ್ತಿತ್ತು. ಈ ವ್ಯಾಜ್ಯವನ್ನು ಬೇರೊಂದು ಕೋರ್ಟ್‌ಗೆ ವರ್ಗಾಯಿಸುವಂತೆ ಕೋರಿ ವಕೀಲ ಎಸ್. ರಂಗಸ್ವಾಮಿ ಮತ್ತಿತರರು ಅರ್ಜಿ ಸಲ್ಲಿಸಿದ್ದರು. ಈ ವೇಳೆ ನ್ಯಾಯಾಧೀಶರಿಗೆ ಬೆದರಿಕೆ ಹಾಕಿ, ನ್ಯಾಯಾಲಯದ ಕಲಾಪಕ್ಕೆ ಅಡ್ಡಿಪಡಿಸಲಾಗಿತ್ತು. ನ್ಯಾಯಾಧೀಶರ ದಿನಚರಿಯನ್ನು ಕೂಲಂಕಷವಾಗಿ ಪರಿಶೀಲಿಸಿದ್ದ ಹೈಕೋರ್ಟ್, ವಕೀಲರ ನಡವಳಿಕೆಯನ್ನು ಗಂಭೀರವಾಗಿ ಪರಿಗಣಿಸಿತ್ತು. ಈ ಹಿಂದೆ ಅವರ ವಿರುದ್ಧ ಕ್ರಿಮಿನಲ್ ನ್ಯಾಯಾಂಗ ನಿಂದನೆ, ಬಾರ್ ಕೌನ್ಸಿಲ್ ಶಿಸ್ತುಕ್ರಮ ಹಾಗೂ ಕ್ರಿಮಿನಲ್ ಮೊಕದ್ದಮೆ ಹೂಡಲು ನಿರ್ದೇಶನ ನೀಡಿ, ಅರ್ಜಿದಾರರಿಗೆ ಒಂದು ಲಕ್ಷ ರೂಪಾಯಿ ದಂಡ ವಿಧಿಸಿತ್ತು.

ತಮ್ಮ ತಪ್ಪು ಅರಿತುಕೊಂಡ ವಕೀಲ ರಂಗಸ್ವಾಮಿ, ನ್ಯಾಯಾಲಯಕ್ಕೆ ಬೇಷರತ್ ಕ್ಷಮಾಪಣಾ ಪ್ರಮಾಣಪತ್ರ ಸಲ್ಲಿಸಿ ಕಠಿಣ ನಿರ್ದೇಶನಗಳನ್ನು ಹಿಂಪಡೆಯುವಂತೆ ಮನವಿ ಮಾಡಿದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹಂಚಾಟೆ ಸಂಜೀವಕುಮಾರ್ ಅವರಿದ್ದ ಏಕಸದಸ್ಯ ಪೀಠವು ಕ್ಷಮಾದಾನವನ್ನು ಪುರಸ್ಕರಿಸಿತು. ವಕೀಲರ ಮೇಲಿದ್ದ ಕ್ರಿಮಿನಲ್ ನ್ಯಾಯಾಂಗ ನಿಂದನೆ ಹಾಗೂ ಇತರೆ ಕ್ರಿಮಿನಲ್ ಮೊಕದ್ದಮೆ ಪ್ರಕ್ರಿಯೆಗಳನ್ನು ಹಿಂಪಡೆಯಲು ನಿರ್ಧರಿಸಿದ ಪೀಠ, ಸಮಾಜಮುಖಿ ಸುಧಾರಣೆಯ ಭಾಗವಾಗಿ ಒಂದು ಸಾವಿರ ಹಣ್ಣಿನ ಗಿಡ ನೆಟ್ಟು ಬೆಳೆಸಲು ಮತ್ತು ಒಂದು ಸಾವಿರ ರೂಪಾಯಿ ದಂಡ ಪಾವತಿಸಲು ಆದೇಶಿಸಿದೆ

You may also like