ಶನಿವಾರ, 24 ಅಕ್ಟೋಬರ್ 2026

ಮಂಗಳೂರು : ಮನೆ ಅಂಗಳಕ್ಕೆ ನುಗ್ಗಿ ನಾಯಿ ಹೊತ್ತೊಯ್ದ ಚಿರತೆ!!

ಕರಾವಳಿ ಭಾಗದಲ್ಲಿ ಮತ್ತೆ ಚಿರತೆ ಹಾವಳಿ ಆರಂಭವಾಗಿದ್ದು, ಸಾರ್ವಜನಿಕರಲ್ಲಿ ಭೀತಿಯ ವಾತಾವರಣ ನಿರ್ಮಾಣವಾಗಿದೆ. ಮಂಗಳೂರು ಹೊರವಲಯದ ಬಜಪೆ ಸಮೀಪದ ಪೆರ್ಮುದೆ ಎಂಬಲ್ಲಿ ಚಿರತೆಯೊಂದು ಆಹಾರ ಹುಡುಕುತ್ತಾ ನೇರವಾಗಿ ಮನೆಯ ಅಂಗಳಕ್ಕೇ ನುಗ್ಗಿ ನಾಯಿಯನ್ನು ಹೊತ್ತೊಯ್ದಿದೆ.

ಅಂಗಳದಲ್ಲಿ ಮಲಗಿದ್ದ ಸಾಕು ನಾಯಿಯ ಮೇಲೆ ಹೊಂಚು ಹಾಕಿ ದಾಳಿ ನಡೆಸಿದ ಚಿರತೆ, ಕ್ಷಣಾರ್ಧದಲ್ಲಿ ಅದನ್ನು ತನ್ನ ಬಾಯಿಯಲ್ಲಿ ಕಚ್ಚಿಕೊಂಡು ಓಡಿ ಹೋಗಿದೆ. ಕತ್ತಲಲ್ಲಿ ನಡೆದ ಈ ಇಡೀ ರೋಮಾಂಚನಕಾರಿ ಹಾಗೂ ಭಯಾನಕ ದೃಶ್ಯಾವಳಿಗಳು ಮನೆಯಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸಂಪೂರ್ಣವಾಗಿ ಸೆರೆಯಾಗಿವೆ.

ಮನೆಯ ಆವರಣದವರೆಗೂ ಚಿರತೆ ಬಂದು ಸಾಕುಪ್ರಾಣಿಗಳನ್ನು ಬೇಟೆಯಾಡುತ್ತಿರುವುದು ಸ್ಥಳೀಯ ನಿವಾಸಿಗಳಲ್ಲಿ ತೀವ್ರ ಆತಂಕ ಮೂಡಿಸಿದೆ. ಈ ಭಾಗದಲ್ಲಿ ಕಳೆದ ಕೆಲವು ದಿನಗಳಿಂದ ಚಿರತೆಗಳ ಓಡಾಟ ಗಣನೀಯವಾಗಿ ಹೆಚ್ಚಾಗಿದ್ದು, ಸುತ್ತಮುತ್ತಲ ಪರಿಸರದಲ್ಲಿ ಒಂದಕ್ಕಿಂತ ಹೆಚ್ಚು ಚಿರತೆಗಳು ಬೀಡುಬಿಟ್ಟಿರುವ ಶಂಕೆ ವ್ಯಕ್ತವಾಗಿದೆ. ಈ ಘಟನೆಯಿಂದ ಎಚ್ಚೆತ್ತುಕೊಂಡಿರುವ ಪೆರ್ಮುದೆ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು, ಅರಣ್ಯ ಇಲಾಖೆ ತಕ್ಷಣವೇ ಕಾರ್ಯಪ್ರವೃತ್ತರಾಗಬೇಕು ಎಂದು ಆಗ್ರಹಿಸಿದ್ದಾರೆ. ಈ ಭಾಗದಲ್ಲಿ ತಕ್ಷಣವೇ ಬೋನು ಇಟ್ಟು ಚಿರತೆಯನ್ನು ಸೆರೆಹಿಡಿಯಬೇಕು ಹಾಗೂ ನಿರಂತರ ನಿಗಾ ವಹಿಸಬೇಕು ಎಂದು ಒತ್ತಾಯಿಸಿದ್ದಾರೆ.