ಮಂಗಳೂರು: ರಸ್ತೆಗಳನ್ನು ಗುಡಿಸಲು ಫಾರ್ಚುನರ್ ಕಾರಿನಲ್ಲಿ ಬರುವ ಪೌರಕಾರ್ಮಿಕ!!
ಈ ಜಗತ್ತಿನಲ್ಲಿ ಯಾವ ಕೆಲಸವೂ ಸಣ್ಣದಲ್ಲ, ಯಾವುದೂ ದೊಡ್ಡದಲ್ಲ. ಶ್ರದ್ಧೆ ಇಟ್ಟು ಮಾಡಿದರೆ ಯಾವುದು ಮೇಲೂ ಅಲ್ಲ, ಕೀಳೂ ಅಲ್ಲ. ಹೀಗೆ ಇವೆಲ್ಲವನ್ನೂ ಮನಗಂಡು ಆಳಾಗಿ ದುಡಿದರೆ ಅರಸನಾಗಿ ಬಾಳಬಹುದು ಎಂಬುದಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟವಾಳದ ಪೌರಕಾರ್ಮಿಕೇಶಪ್ಪ ಅವರೆ ಸಾಕ್ಷಿ. ಯಾಕೆಂದರೆ ಸುಮಾರು 30 ವರ್ಷಗಳಿಂದಲೂ ಪೌರಕಾರ್ಮಿಕರಾಗಿ ದುಡಿಯುತ್ತಿರುವ ಸೇಸಪ್ಪ ಅವರು ಇಂದು ಫಾರ್ಚುನರ್ ಕಾರಿನಲ್ಲಿ ಬಂದು ಮಂಗಳೂರಿನ B C ರೋಡ್ ರಸ್ತೆಗಳನ್ನು ಸ್ವಚ್ಛ ಮಾಡುತ್ತಾರೆ.
Sponsoredಹೌದು, 30 ವರ್ಷಗಳಿಂದ ಪೌರಕಾರ್ಮಿಕರಾಗಿ ಕಠಿಣ ಶ್ರಮ ವಹಿಸುತ್ತಿರುವ ಇವರು, ಪ್ರತಿದಿನ ಬೆಳಿಗ್ಗೆ 5 ಗಂಟೆಗೆ ತಾವು ಖರೀದಿಸಿದ ಫಾರ್ಚುನರ್ ಕಾರಿನಲ್ಲಿ ಬಿ.ಸಿ.ರೋಡ್ಗೆ ಆಗಮಿಸಿ ನಗರ ಸ್ವಚ್ಛಗೊಳಿಸುತ್ತಿರುವುದು ಹಲವರ ಗಮನ ಸೆಳೆದಿದೆ. ಈ ಹಿಂದೆ 50 ರೂ. ದಿನಗೂಲಿಗೆ ದುಡಿಯುತ್ತಿದ್ದ ಇವರು ಹೈನುಗಾರಿಕೆ ಹಾಗೂ ಕೃಷಿಯಲ್ಲೂ ತೊಡಗಿಸಿಕೊಂಡು ಸ್ವಂತ ಗಳಿಕೆಯಲ್ಲಿ ಒಂದೊಂದಾಗಿ ಮಾರುತಿ 800, ಆಲ್ಟೊ, ಓಮ್ನಿ, ಸ್ಕಾರ್ಪಿಯೋ, ರಿಟ್ಜ್ ಹೀಗೆ ನಾನಾ ಕಾರುಗಳನ್ನು ಬದಲಾಯಿಸುತ್ತಾ ಇದೀಗ 12 ಲಕ್ಷಕ್ಕೆ ಫಾರ್ಚುನರ್ ಕಾರು ಖರೀದಿಸಿದ್ದಾರೆ. ಕಾರುಗಳ ಕುರಿತು ಸೇಸಪ್ಪಗೆ ಇರುವ ಕ್ರೇಜ್ ಹಾಗೂ ಇವರ 30 ವರ್ಷಗಳ ಜರ್ನಿ ರೋಚಕವಾಗಿದೆ.
ಕಲಿತದ್ದು 3ನೇ ತರಗತಿ, 1996ರಲ್ಲಿ ದಿನಕ್ಕೆ 50 ರೂಪಾಯಿ ದಿನಗೂಲಿಗೆ ಸೇರಿದ್ದ ಸೇಸಪ್ಪ ಅವರಿಗೆ ಕಾರುಗಳೆಂದರೆ ಅಪಾರ ಪ್ರೀತಿ. ಹಿಂದೆ ಸೈಕಲ್ನಲ್ಲಿ ತಿರುಗಾಡುತ್ತಿದ್ದ ದಿನಗಳಲ್ಲೇ ಕಾರು ಕೊಳ್ಳುವ ಕನಸು ಕಂಡಿದ್ದ ಇವರು, ಸಣ್ಣ ಸಣ್ಣ ಉಳಿತಾಯ ಮಾಡಿ ಮೊದಲು ಮಾರುತಿ 800, ಬಳಿಕ ಓಮ್ನಿ, ರಿಟ್ಜ್, ಆಲ್ಟೊ ಹಾಗೂ ಸ್ಕಾರ್ಪಿಯೋ ಕಾರುಗಳನ್ನು ಖರೀದಿಸಿದ್ದರು. ಇತ್ತೀಚೆಗೆ ಆಲ್ಟೊ ಮತ್ತು ಸ್ಕಾರ್ಪಿಯೋ ಮಾರಿ, ಕೊಂಚ ಸಾಲ ಮಾಡಿ ತಮ್ಮ ಕನಸಿನ ಫಾರ್ಚೂನರ್ ಕಾರನ್ನು ಖರೀದಿಸಿ ಎಲ್ಲರ ಗಮನ ಸೆಳೆದಿದ್ದಾರೆ. ಕಳೆದ 30 ವರ್ಷಗಳಿಂದ ಪೌರಕಾರ್ಮಿಕರಾಗಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಸೇಸಪ್ಪಣ್ಣ, ಕಚೇರಿಯ ತ್ಯಾಜ್ಯ ವಿಲೇವಾರಿ ವಾಹನ ಚಾಲಕರಾಗಿಯೂ ಕೆಲಸ ಮಾಡಿದ್ದಾರೆ. ಸ್ವಚ್ಛತಾ ಕಾಯಕದ ಜೊತೆಗೆ ಕೃಷಿ, ಹೈನುಗಾರಿಕೆ, ಕೂಲಿ ಕೆಲಸ ಹಾಗೂ ಪರಂಪರಾಗತವಾಗಿ ಬಂದ ದೈವನರ್ತನ ಸೇವೆಯನ್ನೂ ಅಚ್ಚುಕಟ್ಟಾಗಿ ನಡೆಸಿಕೊಂಡು ಬರುತ್ತಿದ್ದಾರೆ.
ಹೇಗೆ ಈ ಬದಲಾವಣೆ?
1996ರಲ್ಲಿ ಕೇವಲ ₹50 ದಿನಗೂಲಿಗೆ ಪೌರಕಾರ್ಮಿಕರಾಗಿ ಕೆಲಸ ಕೆಲಸ ಆರಂಭಿಸಿದ ಸೇಸಪ್ಪಣ್ಣ, ದಿನ ಕಳೆದಂತೆ ಕಾಯಂ ನೌಕರರಾದರು. 3ನೇ ತರಗತಿಯ ವಿದ್ಯಾಭ್ಯಾಸ ಹೊಂದಿದ್ದರೂ, ಬದುಕಿನ ಪಾಠಗಳನ್ನು ಅವರು ಅನುಭವದಿಂದ ಕಲಿತರು. ಜೀವನದ ಒಂದು ಹಂತದಲ್ಲಿ ವೈಯಕ್ತಿಕ ಮತ್ತು ಕೌಟುಂಬಿಕ ಕಾರಣಗಳಿಂದ ಕುಡಿತದ ಚಟಕ್ಕೆ ಒಳಗಾಗಿದ್ದರು. ಆದರೆ ಅದನ್ನು ತಮ್ಮ ಬದುಕಿನ ಅಂತಿಮ ಅಧ್ಯಾಯವಾಗಲು ಅವರು ಬಿಡಲಿಲ್ಲ.
2005ರ ಬಳಿಕ ಬದುಕನ್ನು ಬದಲಿಸಿಕೊಳ್ಳುವ ದೃಢ ನಿರ್ಧಾರ ಕೈಗೊಂಡರು. ಆಗ ಎಸ್ಐ ಆಗಿದ್ದ ಬೆಳ್ಳಿಯಪ್ಪ ಅವರ ಮಾತು ಅವರಿಗೆ ಪ್ರೇರಣೆಯಾಯಿತು. ಕುಡಿತವನ್ನು ಸಂಪೂರ್ಣವಾಗಿ ತ್ಯಜಿಸಿ, ದುಡಿಮೆಯ ದಾರಿಯಲ್ಲಿ ಹೊಸ ಬದುಕು ಆರಂಭಿಸಿದರು. ಅಲ್ಲಿಂದ ಸೇಸಪ್ಪಣ್ಣ ಜೀವನದ ದಿಕ್ಕೇ ಬದಲಾಯಿತು. ದುಡಿಮೆ ಜತೆಗೆ ಕಾರು ಖರೀದಿಸುವ ಕ್ರೇಜ್ ಶುರುವಾಯಿತು. ಒಂದೊಂದು ಕಾರಿನಿಂದ ಬಡ್ತಿ ಪಡೆದು ಈಗ ಫಾರ್ಚೂನರ್ ಮಟ್ಟಕ್ಕೆ ಬೆಳೆದಿದ್ದಾರೆ.
ಸೇಸಪಣ್ಣ ಎಂಬ ಪೌರ ಕಾರ್ಮಿಕ ಪ್ರತಿನಿತ್ಯ ಕೆಲಸದ ಸ್ಥಳಕ್ಕೆ ತಮ್ಮದೇ ಫಾರ್ಚೂನರ್ ಕಾರನ್ನು ಸ್ವತಃ ಚಾಲನೆ ಮಾಡಿಕೊಂಡು ಬರುತ್ತಾರೆ. ಒಂದು ಜಾಗದಲ್ಲಿ ಅದನ್ನು ನಿಲ್ಲಿಸಿ ಬೆಳಗ್ಗೆ 5ಕ್ಕೇ ಪೊರಕೆ ಹಿಡಿದು ತಮ್ಮ ಕೆಲಸ ಆರಂಭಿಸುತ್ತಾರೆ. 50 ರು. ದಿನಗೂಲಿಯಿಂದ ಆರಂಭವಾದ ಅವರ ಬದುಕು ಈಗ 35 ಲಕ್ಷ ರು. ಮೌಲ್ಯದ ಕಾರಿನಲ್ಲಿ ಓಡಾಡುವ ಹಂತಕ್ಕೆ ಬಂದಿದೆ. ಸ್ವಂತ ಮನೆಯನ್ನೂ ಹೊಂದಿದ್ದಾರೆ.
ಫಾರ್ಚುನರ್ ಕಾರು ಖರೀದಿಸುವ ಆಸಕ್ತಿ ನನಗಿತ್ತು. ಹತ್ತು ದಿನ ಹಿಂದೆ ಸೆಕೆಂಡ್ ಹ್ಯಾಂಡ್ ಫಾರ್ಚುನರ್ ಕಾರನ್ನು 12 ಲಕ್ಷ ರೂ. ನೀಡಿ ಖರೀದಿಸಿದೆ. ಇದಕ್ಕೂ ಮೊದಲು ತನ್ನಲ್ಲಿ ಸ್ಕಾರ್ಪಿಯೋ ಮತ್ತು ಆಲ್ಟೋ ಕಾರುಗಳಿದ್ದವು. ಅವುಗಳೆರಡನ್ನೂ ಮಾರಿ ಈ ಕಾರು ಖರೀದಿಸಿದೆ. ಸ್ವಂತ ಕಾರು ಬೇಕು ಎಂಬ ಹಂಬಲ ಹಿಂದಿನಿಂದಲೂ ಇತ್ತು. ಆರಂಭದಲ್ಲಿ ಮಾರುತಿ 800 ಖರೀದಿಸಿದ್ದೆ. ಅದನ್ನು ಕೊಟ್ಟು ಓಮ್ನಿ, ಬಳಿಕ ರಿಟ್ಜ್ ಹೀಗೆ ಹಣ ಸಂಗ್ರಹವಾದೊಡನೆ ಕಾರುಗಳನ್ನು ಖರೀದಿಸುತ್ತಿದ್ದೆ ಎನ್ನುತ್ತಾರೆ ಸೇಸಪ್ಪ.
ದೈವ ಬಲದ ನಂಬಿಕೆ
ಸೇಸಪ್ಪ ಅವರ ತಂದೆ ದೈವ ನರ್ತಕರು. ಪರಂಪರೆಯ ದೈವ ನರ್ತನ ಸೇವೆ ಮುಂದುವರಿಸುತ್ತಿದ್ದಾರೆ. ರಜೆ ಹಾಗೂ ಕೆಲಸ ಮುಗಿದ ಮೇಲೆ ಹೈನುಗಾರಿಕೆ , ಕೃಷಿಯಲ್ಲೂ ತೊಡಗಿಸಿಕೊಂಡಿದ್ದಾರೆ. ಕೂಲಿ ಕೆಲಸಕ್ಕೂ ಹೋಗುತ್ತಾರೆ. ತಮ್ಮ ಬದುಕಿಗೆ ದೈವಗಳೇ ಶಕ್ತಿ ನೀಡಿವೆ ಎಂಬ ಬಲವಾದ ನಂಬಿಕೆ ಸೇಸಪ್ಪ ಅವರದ್ದು. ತಾನು ಇದುವರೆಗೆ ಯಾವುದೇ ಔಷಧ ಸೇವಿಸಿಲ್ಲ, ಆರೋಗ್ಯವನ್ನು ದೈವ ಕಾಪಾಡಿದೆ ಎಂಬ ಅಚಲ ನಂಬಿಕೆ ಅವರಿಗಿದೆ.




