ಕೇರಳದ 19 ವರ್ಷದ ಮಾಡೆಲ್ ಹಾಗೂ ಕಾನೂನು ವಿದ್ಯಾರ್ಥಿನಿ ಕಾಜಿಯಾ ಲಿಜ್ ಮೆಜೊ ‘ಮಿಸ್ ಯೂನಿವರ್ಸ್ ಇಂಡಿಯಾ 2026’ ಕಿರೀಟವನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಈ ಮೂಲಕ ಈ ಪ್ರತಿಷ್ಠಿತ ವೇದಿಕೆಯಲ್ಲಿ ಸೌಂದರ್ಯ ಕಿರೀಟ ಗೆದ್ದ ಕೇರಳದ ಮೊದಲ ಮಹಿಳೆ ಎಂಬ ಐತಿಹಾಸಿಕ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
Sponsoredಕೇರಳ ಮಾವೆಲಿಕ್ಕರದ 19 ವರ್ಷದ ಮಾಡೆಲ್ ಮತ್ತು ಕಾನೂನು ವಿದ್ಯಾರ್ಥಿನಿಯಾಗಿರುವ ಕಾಜಿಯಾ ಲಿಜ್ ಮೆಜೊ ಆಗಸ್ಟ್ 23ರ ಭಾನುವಾರ ಜೈಪುರದಲ್ಲಿ ನಡೆದ ಗ್ರ್ಯಾಂಡ್ ಫಿನಾಲೆಯಲ್ಲಿ 52 ಫೈನಲಿಸ್ಟ್ಗಳ ಪೈಕಿ ವಿಜೇತರಾಗಿ ಹೊರಹೊಮ್ಮಿದರು. ಪ್ರತಿಷ್ಠಿತ ಕಿರೀಟದೊಂದಿಗೆ ಕಾಜಿಯಾ ಈಗ ನವೆಂಬರ್ನಲ್ಲಿ ಪೋರ್ಟೊ ರಿಕೊದಲ್ಲಿ ನಡೆಯಲಿರುವ 75ನೇ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ದೇಶವನ್ನು ಪ್ರತಿನಿಧಿಸಲಿದ್ದಾರೆ.
ಯಾರೀ ಕಾಜಿಯಾ ಲಿಜ್ ಮೆಜೊ?:
ಕೇರಳದ ಮಾವೆಲಿಕ್ಕರದಲ್ಲಿ ಹುಟ್ಟಿ ಬೆಳೆದ ಕಾಜಿಯಾ ಕಾನೂನು ವಿದ್ಯಾರ್ಥಿನಿಯಾಗಿದ್ದು, ಮಾಡೆಲ್, ನಟಿ ಮತ್ತು ನರ್ತಕಿಯಾಗಿಯೂ ಹೆಸರು ಮಾಡಿದ್ದಾರೆ. ಅವರ ಇನ್ಸ್ಟಾಗ್ರಾಮ್ ಬಯೋ ಅವರನ್ನು “ಮಾಡೆಲ್ – ನಟಿ – ನರ್ತಕಿ” ಎಂದು ವಿವರಿಸಿದೆ. ಈ ಪ್ಲ್ಯಾಟ್ಫಾರ್ಮ್ನಲ್ಲಿ 40,000ಕ್ಕೂ ಹೆಚ್ಚು ಫಾಲೋವರ್ಗಳನ್ನು ಹೊಂದಿದ್ದಾರೆ. ಇದಕ್ಕೂ ಮುನ್ನ ಮಿಸ್ ಟೀನ್ ಇಂಟರ್ನ್ಯಾಷನಲ್, 2025ರಲ್ಲಿ ಭಾರತವನ್ನು ಪ್ರತಿನಿಧಿಸಿ, ಮೊದಲ ರನ್ನರ್-ಅಪ್ ಆಗಿ ಹೊರಹೊಮ್ಮಿದ್ರು. ಇದೀಗ ಕೇವಲ 19ನೇ ವಯಸ್ಸಿನಲ್ಲಿ ಮಿಸ್ ಯೂನಿವರ್ಸ್ ಇಂಡಿಯಾ ಕಿರೀಟವನ್ನು ಗೆಲ್ಲುವ ಮೂಲಕ ದೊಡ್ಡ ಮನ್ನಣೆಗೆ ಪಾತ್ರರಾಗಿದ್ದಾರೆ.
2007ರಲ್ಲಿ ಜನಿಸಿದ ಇವರು ಅಬುಧಾಬಿಯಲ್ಲಿ ಶಾಲಾ ಶಿಕ್ಷಣ ಪೂರೈಸಿದ್ದರು. 17ನೇ ವಯಸ್ಸಿನಲ್ಲಿ ‘ಮಿಸ್ ಟೀನ್ ದಿವ್ಯಾ 2024’ ಗೆದ್ದಿದ್ದ ಇವರು, ‘ಮಿಸ್ ಟೀನ್ ಇಂಟರ್ನ್ಯಾಷನಲ್ 2025’ರಲ್ಲಿ ರನ್ನರ್ ಅಪ್ ಆಗಿದ್ದರು. ಈ ವರ್ಷ ‘ಮಿಸ್ ಯೂನಿವರ್ಸ್ ಕೇರಳ 2026’ ಕಿರೀಟ ಧರಿಸಿದ ಕಿರಿಯ ಸ್ಪರ್ಧಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. 2021ರಲ್ಲಿ ಹರ್ನಾಜ್ ಸಂಧು ಮಿಸ್ ಯೂನಿವರ್ಸ್ ಗೆದ್ದಿದ್ದನ್ನು ನೋಡಿ ಪ್ರೇರಿತರಾದ ಕಾಜಿಯಾ, ಇದೀಗ ಕೇವಲ 19ನೇ ವಯಸ್ಸಿನಲ್ಲಿ ಈ ಮೈಲಿಗಲ್ಲು ತಲುಪಿದ್ದಾರೆ.
ಮಾಡೆಲಿಂಗ್ ಜೊತೆಗೆ ಕಾಜಿಯಾ 12 ವರ್ಷಗಳ ಕಾಲ ಶಾಸ್ತ್ರೀಯ ನೃತ್ಯ ತರಬೇತಿ ಪಡೆದಿದ್ದಾರೆ. ಗಾಯನ, ಡ್ರಮ್ಸ್ ಹಾಗೂ ವಯಲಿನ್ ನುಡಿಸುವುದರಲ್ಲೂ ಇವರು ಸಿದ್ಧಹಸ್ತರು. ಸಾರ್ವಜನಿಕ ಭಾಷಣಕಾರಿಯೂ ಆಗಿರುವ ಇವರು ಮಲಯಾಳಂನ ‘ಶೈಲಾಕ್’ ಸಿನಿಮಾ ಮೂಲಕ ನಟನೆಗೂ ಪಾದಾರ್ಪಣೆ ಮಾಡಿದ್ದಾರೆ. ಈಗ ಅಂತರರಾಷ್ಟ್ರೀಯ ವೇದಿಕೆಯಲ್ಲಿ ಭಾರತದ ಕೀರ್ತಿಪತಾಕೆ ಹಾರಿಸಲು ಕಾಜಿಯಾ ಸಜ್ಜಾಗಿದ್ದಾರೆ.




