ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 2 ಚಿನ್ನದ ಪ್ರಶಸ್ತಿ
ಕ್ವಾಲಿಟಿ ಸರ್ಕಲ್ ಫೋರಮ್ ಆಫ್ ಇಂಡಿಯಾದ ಬೆಂಗಳೂರು ಅಧ್ಯಾಯವು ಇತ್ತೀಚೆಗೆ ಆಯೋಜಿಸಿದ್ದ ‘ಗುಣಮಟ್ಟ ಪರಿಕಲ್ಪನೆಗಳ ಅಧ್ಯಾಯ ಸಮ್ಮೇಳನ-2026’ರಲ್ಲಿ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ಎರಡು ಚಿನ್ನದ ಪದಕಗಳನ್ನು ಗೆದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
Sponsoredಕಾರ್ಯಾಚರಣೆಯ ಮಾನದಂಡಗಳು, ತಾಂತ್ರಿಕ ನಾವೀನ್ಯತೆ ಹಾಗೂ ಸುರಕ್ಷತಾ ಕ್ರಮಗಳಲ್ಲಿ ತೋರಿದ ಅತ್ಯುತ್ತಮ ನಿರ್ವಹಣೆಗೆ ವಿಮಾನ ನಿಲ್ದಾಣದ ತಾಂತ್ರಿಕ ತಂಡಗಳಿಗೆ ಈ ಗೌರವ ಲಭಿಸಿದೆ. ವಿಮಾನ ನಿಲ್ದಾಣದ ಎರಡು ಪ್ರತ್ಯೇಕ ವಿಭಾಗಗಳ ಪ್ರತಿನಿಧಿಗಳು ತಲಾ ಒಂದೊಂದು ಚಿನ್ನದ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಟೀಮ್ ಮಾರ್ಗದೀಪ್ – ಅಲೈಡ್ ಕಾನ್ಸೆಪ್ಟ್ ವಿಭಾಗ: ಕೃಷ್ಣದಾಸ್ ಎಂ.ಎಸ್. ಮತ್ತು ಇಪ್ಸಿತಾ ಚೌಧರಿ ಅವರನ್ನೊಳಗೊಂಡ ಈ ತಂಡವು ‘ಪ್ರೆಸಿಶನ್ ಅಪ್ರೋಚ್ ಲೈಟಿಂಗ್ (PAL) ಕೆಟಗರಿ 1 ಸಿಸ್ಟಮ್’ ಕುರಿತ ಯೋಜನೆಗಾಗಿ ಚಿನ್ನದ ಪದಕ ಮುಡಿಗೇರಿಸಿಕೊಂಡಿದೆ. ಸಿಕ್ಸ್ ಸಿಗ್ಮಾ, ಟೋಟಲ್ ಮೇಂಟೆನೆನ್ಸ್ ಕಂಟ್ರೋಲ್ ಹಾಗೂ ಲೀನ್ ಸೇಫ್ಟಿ ಸರ್ಕಲ್ ವಿಧಾನಗಳನ್ನು ಒಗ್ಗೂಡಿಸಿ ರನ್‌ವೇ ಬೆಳಕಿನ ವ್ಯವಸ್ಥೆಯ ಸುರಕ್ಷತೆ ಮತ್ತು ದಕ್ಷತೆಯನ್ನು ಹೆಚ್ಚಿಸಿದ ಕಾರ್ಯಕ್ಕೆ ಈ ಮನ್ನಣೆ ದೊರೆತಿದೆ.
ಟೀಮ್ ಸೇಫ್ ಎಡ್ಜ್ ಅಲೈಡ್ (ಕೈಜೆನ್) ಕಾನ್ಸೆಪ್ಟ್ ವಿಭಾಗ: ಪ್ರಣೋಯ್ ಅಗಸ್ಟಿನ್ ಫ್ರಾನ್ಸಿಸ್ ಮತ್ತು ಪ್ರಜೀಶ್ ಪ್ರಕಾಶ್ ಅವರಿದ್ದ ಈ ತಂಡವು ಕೃತಕ ಬುದ್ಧಿಮತ್ತೆ (AI) ಆಧಾರಿತ ವಾಹನ ನಿಗಾ ವ್ಯವಸ್ಥೆಗಾಗಿ ಚಿನ್ನದ ಪದಕ ಪಡೆದಿದೆ. ಸುಧಾರಿತ ಚಾಲಕ ಸಹಾಯ ವ್ಯವಸ್ಥೆ (ADAS) ಮತ್ತು ಚಾಲಕರ ಚಲನವಲನ ಮೇಲ್ವಿಚಾರಣಾ ವ್ಯವಸ್ಥೆಯನ್ನು (DMS) ಬಳಸಿಕೊಂಡು ವಿಮಾನ ನಿಲ್ದಾಣದ ಆವರಣದಲ್ಲಿ ವಾಹನಗಳ ಸಂಚಾರವನ್ನು ಮತ್ತಷ್ಟು ಸುರಕ್ಷಿತ ಹಾಗೂ ಚುರುಕುಗೊಳಿಸಿದ ನಾವೀನ್ಯತೆಗೆ ಈ ಪ್ರಶಸ್ತಿ ನೀಡಲಾಗಿದೆ.




