ಶನಿವಾರ, 24 ಅಕ್ಟೋಬರ್ 2026

ಮಂಗಳೂರು-ಬೆಂಗಳೂರು ರೈಲು ಪ್ರಯಾಣಿಕರಿಗೆ ಮಹತ್ವದ ಸೂಚನೆ

ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಎಡಕುಮೇರಿ-ಶಿರಿಬಾಗಿಲು ಬಳಿ ರೈಲ್ವೆ ಹಳಿ ಮೇಲೆ ಗುಡ್ಡ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಮಂಗಳೂರು-ಬೆಂಗಳೂರು ಮಾರ್ಗದಲ್ಲಿ ರೈಲು ಸಂಚಾರಕ್ಕೆ ಅಡಚಣೆ ಉಂಟಾಗಿದ್ದು, ಶನಿವಾರ ರಾತ್ರಿ ಮಣ್ಣು ತೆರವು ಕಾರ್ಯಾಚರಣೆ ಮಳೆ ನಡುವೆಯೂ ಮುಂದುವರಿದಿದ್ದು, ಇಂದು ಕೂಡಾ ಕೆಲವು ರೈಲುಗಳ ಸಂಚಾರ ಸ್ಥಗಿತ ಮಾಡಲಾಗಿದೆ. ಹಲವು ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ.

ಗುಡ್ಡಕುಸಿತದ ಹಿನ್ನೆಲೆಯಲ್ಲಿ ಯಶವಂತಪುರ–ಕಾರವಾರ ಎಕ್ಸ್‌ಪ್ರೆಸ್, ಮಂಗಳೂರು–ಯಶವಂತಪುರ ಗೊಮ್ಮಟೇಶ್ವರ ಎಕ್ಸ್‌ಪ್ರೆಸ್ ಹಾಗೂ ಕಾರವಾರ–ಕೆಎಸ್‌ಆರ್ ಬೆಂಗಳೂರು ಪಂಚಗಂಗಾ ಎಕ್ಸ್‌ಪ್ರೆಸ್ ರೈಲುಗಳ ಸಂಚಾರವನ್ನು ಇಂದು ಕೂಡ ಸ್ಥಗಿತಗೊಳಿಸಲಾಗಿದೆ.

ಇನ್ನು ಬೆಂಗಳೂರು–ಮುರ್ಡೇಶ್ವರ ಎಕ್ಸ್‌ಪ್ರೆಸ್, ರೈಲು ಸಂಖ್ಯೆ 17377 ವಿಜಯಪುರ–ಮಂಗಳೂರು ಸೆಂಟ್ರಲ್ ಎಕ್ಸ್‌ಪ್ರೆಸ್ ಹಾಗೂ 17378 ಮಂಗಳೂರು ಸೆಂಟ್ರಲ್–ವಿಜಯಪುರ ಎಕ್ಸ್‌ಪ್ರೆಸ್ ರೈಲುಗಳನ್ನು ಬದಲಿ ಮಾರ್ಗದಲ್ಲಿ ಸಂಚರಿಸುವಂತೆ ಮಾಡಲು ರೈಲ್ವೆ ಇಲಾಖೆ ಕ್ರಮ ಕೈಗೊಂಡಿದೆ.

ಎಡಕುಮೇರಿ ಭಾಗದಲ್ಲಿ ತೆರವು ಮತ್ತು ಸುರಕ್ಷತಾ ಕಾರ್ಯಾಚರಣೆ ಮುಂದುವರಿದಿರುವುದರಿಂದ ಮಂಗಳೂರು ಬೆಂಗಳೂರು ಮಾರ್ಗದಲ್ಲಿ ಪ್ರಯಾಣ ಮಡುವವರು ರೈಲು ಸಂಚಾರದ ಸ್ಥಿತಿಯನ್ನು ಪರಿಶೀಲನೆ ಮಾಡಿ ಪ್ರಯಾಣ ಮಾಡಲು ಸೂಚಿಸಲಾಗಿದೆ.