ಬೆಂಗಳೂರು: ಕೆಎಂಎಫ್‌ಗೆ ಹಾಲು ಸಾಗಿಸುತ್ತಿದ್ದ ನಂದಿನಿ ಹಾಲಿನ ಟ್ಯಾಂಕರ್ ಹೆಬ್ಬಾಳ ಸಮೀಪದ ಸರ್ವಿಸ್ ರಸ್ತೆಯಲ್ಲಿ ಪಲ್ಟಿಯಾದ ಪರಿಣಾಮ ಸುಮಾರು 14 ಸಾವಿರ ಲೀಟರ್ ಹಾಲು ರಸ್ತೆಯಲ್ಲಿ ಹರಿದುಹೋದ ಘಟನೆ ನಡೆದಿದೆ.
ಟ್ಯಾಂಕರ್ ಏಕಾಏಕಿ ಪಲ್ಟಿಯಾದ ಬಳಿಕ ಅದರಲ್ಲಿದ್ದ ಹಾಲು ರಸ್ತೆಗೆ ಸೋರಿಕೆಯಾಗಿದ್ದು, ಅಪಾರ ಪ್ರಮಾಣದ ಹಾಲು ವ್ಯರ್ಥವಾಗಿದೆ. ಟ್ಯಾಂಕರ್‌ನ ಮುಚ್ಚಳ ಮುಚ್ಚಲು ಸ್ಥಳೀಯರು ಹರಸಾಹಸಪಟ್ಟಿದ್ದಾರೆ. ಇದೇ ವೇಳೆ ಕೆಲವರು ಬಾಟಲಿಗಳಲ್ಲಿ ಹಾಲು ತುಂಬಿಕೊಂಡು ತೆಗೆದುಕೊಂಡು ಹೋಗಿರುವುದು ಕಂಡುಬಂದಿದೆ.
ಅಪಘಾತದಲ್ಲಿ ಟ್ಯಾಂಕರ್ ಚಾಲಕನಿಗೆ ಗಂಭೀರ ಗಾಯಗಳಾಗಿದ್ದು, ತಕ್ಷಣವೇ ಅಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಕುರಿತು ಮಾಹಿತಿ ಪಡೆದ ಸಂಜಯನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

