ಸೋಮವಾರ, 26 ಅಕ್ಟೋಬರ್ 2026
Trending

ವಿದ್ಯುತ್ ಚಿತಾಗಾರದಲ್ಲಿ ಅಜ್ಜಿಯ ಮೃತದೇಹ ಮೇಲೆ ಹಾರಿದ ಮೊಮ್ಮಗ!!

ಪ್ರೀತಿಯ ಅಜ್ಜಿ ಮೃತಪಟ್ಟಿದ್ದು, ಆಕೆಯ ಅಂತಿಮ ಸಂಸ್ಕಾರದ ವೇಳೆ,  ತೀವ್ರ ದುಃಖದಲ್ಲಿದ್ದ 30 ವರ್ಷದ ಮೊಮ್ಮಗ ಇಂದ್ರಜಿತ್ ಬಿಸ್ವಾಸ್ ಎಂಬ ಯುವಕ ಇದ್ದಕ್ಕಿದ್ದಂತೆ ಉರಿಯುತ್ತಿದ್ದ ವಿದ್ಯುತ್ ಚಿತಾಗಾರಕ್ಕೆ ಹಾರಿರುವ ಅಘಾತಕಾರಿ ಘಟನೆ ನಡೆದಿದೆ.

Sponsored

ಪಶ್ಚಿಮ ಬಂಗಾಳದ ನಾದಿಯಾ ಜಿಲ್ಲೆಯ ನಬದ್ವೀಪ್ ಚಿತಾಗಾರದಲ್ಲಿ ಈ ನಡುಕ ಹುಟ್ಟಿಸುವ ಘಟನೆ ನಡೆದಿದೆ. ಧಾರ್ಮಿಕ ವಿಧಿವಿಧಾನಗಳು ಮುಗಿದ ನಂತರ, ಚಿತಾಗಾರದ ಸಿಬ್ಬಂದಿ ಮೃತದೇಹವನ್ನು ವಿದ್ಯುತ್ ಕುಲುಮೆಯೊಳಗೆ ತಳ್ಳಿ ಬಾಗಿಲು ಮುಚ್ಚಲು ಸಿದ್ಧರಾಗುತ್ತಿದ್ದರು. ಈ ವೇಳೆ ಅಜ್ಜಿಯ ಅಗಲಿಕೆಯನ್ನು ಸಹಿಸಲಾಗದೆ ತೀವ್ರ ಮಾನಸಿಕ ಆಘಾತದಲ್ಲಿದ್ದ ಆಕೆಯ ಮೊಮ್ಮಗ ಇಂದ್ರಜಿತ್ ಬಿಸ್ವಾಸ್, ಎಲ್ಲರೂ ನೋಡನೋಡುತ್ತಿದ್ದಂತೆಯೇ ಧಗಧಗನೆ ಉರಿಯುತ್ತಿದ್ದ ಚಿತಾಗಾರದ ಕುಲುಮೆಯೊಳಗೆ ಹಾರಿದ್ದಾನೆ. ಕ್ಷಣಾರ್ಧದಲ್ಲಿ ನಡೆದ ಈ ಘಟನೆಯಿಂದ ಚಿತಾಗಾರದಲ್ಲಿದ್ದ ಸಾರ್ವಜನಿಕರು ಹಾಗೂ ಸಿಬ್ಬಂದಿ ದಿಗ್ಭ್ರಾಂತರಾಗಿದ್ದು, ಸ್ಥಳದಲ್ಲಿ ತೀವ್ರ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಯುವಕ ಕುಲುಮೆಯೊಳಗೆ ಧುಮುಕುತ್ತಿದ್ದಂತೆಯೇ ಅಲ್ಲೇ ಇದ್ದ ಚಿತಾಗಾರದ ಸಿಬ್ಬಂದಿ ಹಾಗೂ ಪ್ರತ್ಯಕ್ಷದರ್ಶಿಗಳು ಕೂಡಲೇ ಧೈರ್ಯ ತೋರಿ ಜ್ವಾಲೆಯ ನಡುವೆಯೂ ಕೆಲವೇ ಸೆಕೆಂಡುಗಳಲ್ಲಿ ಯುವಕನನ್ನು ಎಳೆದು ಹೊರಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ತಕ್ಷಣ ಹೊರಗೆಳೆದ ಕಾರಣ ಯುವಕನ ಜೀವ ಉಳಿದಿದೆಯಾದರೂ, ದೇಹದ ಭಾಗಗಳಿಗೆ ತೀವ್ರ ಸ್ವರೂಪದ ಸುಟ್ಟ ಗಾಯಗಳಾಗಿವ. ಗಾಯಗೊಂಡ ಯುವಕನನ್ನು ತಕ್ಷಣವೇ ಸ್ಥಳೀಯ ನಬದ್ವೀಪ್ ಸ್ಟೇಟ್ ಜನರಲ್ ಆಸ್ಪತ್ರೆಗೆ ರವಾನಿಸಲಾಗಿದ್ದು, ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ.