‘ಜೆನ್-ಜಿ’ ವಿದ್ಯಾರ್ಥಿಗಳು ದೇಶವಿರೋಧಿಗಳಲ್ಲ, ಅವರು ದೇಶದ ಮುಂದಿನ ಭವಿಷ್ಯ – RSS ಮುಖ್ಯಸ್ಥ ಮೋಹನ್ ಭಾಗವತ್
ಪ್ರತಿಭಟನೆ ನಡೆಸುವ ಜೆನ್ ಜಿ (Gen Z) ವಿದ್ಯಾರ್ಥಿಗಳು ದೇಶವಿರೋಧಿಗಳಲ್ಲ. ಅವರ ಧ್ವನಿಯನ್ನು ಗಂಭೀರವಾಗಿ ಪರಿಗಣಿಸಬೇಕು. ಅವರು ನಮ್ಮದೇ ಮುಂದಿನ ಪೀಳಿಗೆ ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
Sponsoredಮುಂಬೈನಲ್ಲಿ Gen Z ಮತ್ತು Gen Alpha ಪೀಳಿಗೆಯನ್ನು ಉದ್ದೇಶಿಸಿ ಮಾತನಾಡಿದ ಅವರು, Gen Z ಯುವಕರು ಯಾವುದಾದರೂ ಪ್ರತಿಭಟನೆಯಲ್ಲಿ ತೊಡಗಿಸಿಕೊಂಡರೆ, ಅವರು ದೇಶದ್ರೋಹಿಗಳಲ್ಲ ಎಂಬುದನ್ನು ನಾನು ಸ್ಪಷ್ಟಪಡಿಸಲು ಬಯಸುತ್ತೇನೆ. ಅವರು ನಮ್ಮದೇ ಜನರು, ನಮ್ಮ ಮುಂದಿನ ಪೀಳಿಗೆ. ಸಂವಾದ ನಡೆಯಬೇಕಾದರೆ ಪರಸ್ಪರ ಗೌರವ ಮತ್ತು ಅಪ್ಯಾಯತೆಯ ಭಾವನೆ ಅಗತ್ಯ. ನಾವಿಬ್ಬರೂ ಪರಸ್ಪರ ಗುರುತಿಸಿ ಗೌರವಿಸಿದಾಗ ಮಾತ್ರ ಅರ್ಥಪೂರ್ಣ ಸಂವಾದ ಸಾಧ್ಯ. ಆಗ ಮಾತ್ರ ಅವರ ಕಳವಳಗಳು ನಮಗೆ ಮತ್ತು ನಮ್ಮ ದೃಷ್ಟಿಕೋನ ಅವರಿಗೆ ಅರ್ಥವಾಗುತ್ತದೆ. ಪ್ರಜಾಪ್ರಭುತ್ವದಲ್ಲಿ ನಡೆಯಬೇಕಾದದ್ದು ಇದೇ ರೀತಿ ಎಂದರು.
ಇಂದಿನ ಯುವಪೀಳಿಗೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಈಗಿನ ಯುವಜನತೆ ಹಾಲಿ ಪೀಳಿಗೆಗಿಂತ ಹೆಚ್ಚು ಪ್ರಾಮಾಣಿಕವಾಗಿದೆ ಎಂದು ನಾನು ಭಾವಿಸುತ್ತೇನೆ. ಈ ಪೀಳಿಗೆ ದೇಶದ ಬಗ್ಗೆ ಪ್ರಾಮಾಣಿಕತೆ, ದೇಶಭಕ್ತಿಯ ಭಾವನೆ ಹಾಗೂ ಸೇವಾ ಮನೋಭಾವವನ್ನು ಹೊಂದಿರಬೇಕು ಎಂದು ಹೇಳಿದರು. ಅಲ್ಲದೆ ವಿದ್ಯಾರ್ಥಿಗಳ ಪ್ರತಿಭಟನೆ ಮತ್ತು ಮಾತುಕತೆಯ ಕುರಿತು ಮಾತನಾಡಿದ ಮೋಹನ್ ಭಾಗವತ್, “ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆಯು ಸಹ ಸರ್ವಸಮ್ಮತಿಯನ್ನು ತಲುಪುವ ಒಂದು ಮಾರ್ಗವಾಗಿದೆ. ಹಲವು ಅಭಿಪ್ರಾಯಗಳು ಒಂದೆಡೆ ಸೇರಿ ಚರ್ಚೆಯ ನಂತರ ಸರ್ವಸಮ್ಮತಿ ರೂಪುಗೊಳ್ಳುತ್ತದೆ. ಆ ಚರ್ಚೆಯು ಮಾತುಕತೆಯ ಮೂಲಕವೂ ನಡೆಯಬಹುದು. ಆದರೆ, ಪ್ರಜಾಪ್ರಭುತ್ವದಲ್ಲಿ ಎಲ್ಲದಕ್ಕೂ ಒಂದು ನಿಯಮಗಳಿರುತ್ತವೆ. ಆ ನಿಯಮಗಳನ್ನು ನಾವು ಮೀರಬಾರದು. ಯುವಜನರ ಸಂಕಷ್ಟಗಳು ನಿಜವಾದುದು. ಭಾರತದ ಶಿಕ್ಷಣ ವ್ಯವಸ್ಥೆಯಲ್ಲಿ ಸುಧಾರಣೆಯ ಅಗತ್ಯವಿದೆ” ಎಂದು ಅವರು ಹೇಳಿದರು.
ದೇಶದ ಶಿಕ್ಷಣ ವ್ಯವಸ್ಥೆಯ ಕುರಿತು ಮಾತನಾಡಿದ ಅವರು, ಇತ್ತೀಚೆಗೆ ನಡೆದ ವಿದ್ಯಾರ್ಥಿಗಳ ಪ್ರತಿಭಟನೆಯಲ್ಲಿ Gen Z ಎತ್ತಿರುವ ಕುಂದುಕೊರತೆಗಳು ಸಮಂಜಸವಾಗಿವೆ. ಭಾರತದ ಶಿಕ್ಷಣ ವ್ಯವಸ್ಥೆಯಲ್ಲಿ ಮಾಡಬೇಕಾದ ಕೆಲಸಗಳು ಸಾಕಷ್ಟಿವೆ. ಅವು ಸರಿಯಾಗಿ ಆಗದಿರುವುದರಿಂದಲೇ ಈ ಧ್ವನಿ ಎದ್ದಿದೆ. ಆದ್ದರಿಂದ ಈ ಕುರಿತು ಸಂವಾದ ನಡೆಯಬೇಕು ಎಂದು ಪ್ರತಿಪಾದಿಸಿದರು.
ತಮ್ಮ ಬಾಲ್ಯದ ದಿನಗಳನ್ನು ಸ್ಮರಿಸಿದ ಭಾಗವತ್, ನಮ್ಮ ಕಾಲದಲ್ಲಿ ಹಿರಿಯರು ಹೇಳಿದ್ದನ್ನು ಪ್ರಶ್ನಿಸದೇ ಒಪ್ಪಿಕೊಳ್ಳುವ ಅಭ್ಯಾಸ ನಮಗಿತ್ತು, ನಾವು ಅವರನ್ನು ಪ್ರಶ್ನಿಸುತ್ತಿರಲಿಲ್ಲ. ಆದರೆ ಇಂದಿನ Gen Z ಮತ್ತು Gen Alpha ಪ್ರಶ್ನಿಸುತ್ತಾರೆ, ಅವರಿಗೆ ತಾರ್ಕಿಕ ಉತ್ತರ ಮತ್ತು ಪ್ರೀತಿಯ ಸಂವಾದ ಬೇಕಿದೆ. ನಮ್ಮಲ್ಲಿ ಶಾಸ್ತ್ರಾರ್ಥ (ಶಾಸ್ತ್ರಗಳ ಆಧಾರದ ಮೇಲೆ ನಡೆಸುವ ವೈಚಾರಿಕ ಚರ್ಚೆ- ಪ್ರಾಚೀನ ಭಾರತದಲ್ಲಿ ವಿದ್ವಾಂಸರು, ಪಂಡಿತರು ಮತ್ತು ಋಷಿಗಳು ಒಂದೆಡೆ ಸೇರಿ ಧರ್ಮ, ತತ್ವಜ್ಞಾನ ಮತ್ತು ಅಧ್ಯಾತ್ಮದ ವಿಷಯಗಳ ಕುರಿತು ಜ್ಞಾನಯುಕ್ತವಾದ ವಾದಗಳನ್ನು ನಡೆಸುತ್ತಿದ್ದರು. ಇದನ್ನು ‘ಶಾಸ್ತ್ರಾರ್ಥ ಸಭೆ’ ಎನ್ನಲಾಗುತ್ತಿತ್ತು) ಎನ್ನುವ ಪರಿಕಲ್ಪನೆ ಇದೆ. ಪ್ರತಿಯೊಬ್ಬರಿಗೂ ತಮ್ಮದೇ ಆದ ದೃಷ್ಟಿಕೋನ ಇರುತ್ತದೆ. ವಿವಿಧ ಅಭಿಪ್ರಾಯಗಳು ಸೇರಿ ಅಂತಿಮವಾಗಿ ಸತ್ಯದ ಸಮಗ್ರ ನೋಟ ಸಿಗುತ್ತದೆ ಎಂದರು.
“ಜೆನ್ ಜಿ ಪ್ರತಿಭಟಿಸಬಾರದು ಎಂದು ನಾನು ಹೇಳುವುದಿಲ್ಲ, ಆದರೆ ಪ್ರಜಾಪ್ರಭುತ್ವದಲ್ಲಿ ಏನನ್ನು ಹೇಗೆ ಮಾಡಬೇಕು ಎಂಬುದಕ್ಕೆ ಕೆಲವು ಮಾರ್ಗಗಳಿವೆ. ಸಂವಿಧಾನವನ್ನು ರೂಪಿಸಿದ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಭಾಷಣಗಳು ಈ ಬಗ್ಗೆ ನಮಗೆ ದಾರಿ ತೋರಿಸುತ್ತವೆ. ಇದನ್ನು ಗಮನಿಸಬೇಕು. ಜೆನ್ ಜಿ ವಿರೋಧಿಸುವುದಕ್ಕಾಗಿಯೇ ಧ್ವನಿ ಎತ್ತುತ್ತಿಲ್ಲ. ಅವರಿಗೆ ಕೆಲವು ಸಮಸ್ಯೆಗಳಿವೆ ಮತ್ತು ಅದನ್ನು ಸರಿಪಡಿಸಬೇಕಾಗಿದೆ ಎಂಬುದನ್ನು ನಾವೂ ಅರ್ಥ ಮಾಡಿಕೊಳ್ಳಬೇಕು. ಹೋರಾಟವು ನನ್ನ ಅಥವಾ ನಿಮ್ಮ ವಿರುದ್ಧವಾಗಿರಬಾರದು, ಬದಲಿಗೆ ವ್ಯವಸ್ಥೆಯನ್ನು ಸರಿಪಡಿಸುವುದಕ್ಕಾಗಿ ಇರಬೇಕು” ಎಂದು ಮೋಹನ್ ಭಾಗವತ್ ಹಲವು ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ.




