Home » ‘ನನಗೆ ಮುಸ್ಲಿಮರೇ ಮೊದಲು’ಎಂದ ಅರವಿಂದ್ ಬೋಳಾರ್- ಸೋಷಿಯಲ್ ಮೀಡಿಯಾದಲ್ಲಿ ಪರ, ವಿರೋಧ ಚರ್ಚೆ!!

‘ನನಗೆ ಮುಸ್ಲಿಮರೇ ಮೊದಲು’ಎಂದ ಅರವಿಂದ್ ಬೋಳಾರ್- ಸೋಷಿಯಲ್ ಮೀಡಿಯಾದಲ್ಲಿ ಪರ, ವಿರೋಧ ಚರ್ಚೆ!!

0 comments

ತುಳು ಚಿತ್ರರಂಗದ ಜನಪ್ರಿಯ ಹಾಸ್ಯ ಕಲಾವಿದ ಅರವಿಂದ್ ಬೋಳಾರ್ ಅವರು ಖಾಸಗಿ ಕಾರ್ಯಕ್ರಮವೊಂದರಲ್ಲಿ ನೀಡಿರುವ ಹೇಳಿಕೆಯ ವೀಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದೀಗ ಪರ-ವಿರೋಧದ ಚರ್ಚೆಗೆ ಕಾರಣವಾಗಿದೆ. 

ಖಾಸಗಿ ಕಾರ್ಯಕ್ರಮದಲ್ಲಿ ಮಾತನಾಡಿರುವ ಅರವಿಂದ್ ಬೋಳಾರ್, ತಮ್ಮ ಸಿನಿಮಾಗಳಲ್ಲಿ ಹಲವು ಬಾರಿ ಮುಸ್ಲಿಂ ಪಾತ್ರಗಳನ್ನು ನಿರ್ವಹಿಸಿರುವುದನ್ನು ಉಲ್ಲೇಖಿಸಿದ್ದಾರೆ. ‘ನನಗೆ ಮುಸ್ಲಿಮರೇ ಮೊದಲು. ನನ್ನನ್ನು ಹೆಚ್ಚು ಇಷ್ಟಪಟ್ಟಿದ್ದೇ ಮುಸ್ಲಿಮರು. ನಾನು ಯಾವುದೇ ವೇದಿಕೆಯಲ್ಲಿ ಕೇಳಿದರೂ ಅದನ್ನೇ ಹೇಳುತ್ತೇನೆ’ ಎಂದು ಅವರು ಹೇಳಿರುವುದು ವೈರಲ್ ಆಗಿರುವ ವೀಡಿಯೋದಲ್ಲಿ ದಾಖಲಾಗಿದೆ. ಸದ್ಯ ಅವರು ನಿರ್ದಿಷ್ಟ ಸಮುದಾಯದ ಕುರಿತು ಅವರು ಆಡಿರುವ ಮಾತುಗಳ ಬಗ್ಗೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದರೆ, ಮತ್ತೊಂದೆಡೆ ಅವರ ಅಭಿಮಾನಿಗಳು ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಒಬ್ಬ ಕಲಾವಿದ ಈ ಮಟ್ಟಕ್ಕೆ ಬೆಳೆಯಲು ವಿವಿಧ ಧರ್ಮಗಳ ಅಭಿಮಾನಿಗಳ ಪ್ರೀತಿ ಹಾಗೂ ಬೆಂಬಲ ಕಾರಣವಾಗಿರುತ್ತದೆ. ಹೀಗಿರುವಾಗ ನಿರ್ದಿಷ್ಟ ಸಮುದಾಯವನ್ನು ಮಾತ್ರ ಉಲ್ಲೇಖಿಸಿ ‘ಅವರೇ ಮೊದಲು’ ಎಂದು ಹೇಳುವುದು ಸರಿಯಲ್ಲ ಎಂದು ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೆಲವರು ಬೋಳಾರ್ ಅವರಿಗೆ ನೇರವಾಗಿ ಕರೆ ಮಾಡಿ ತರಾಟೆಗೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

ಮತ್ತೊಂದೆಡೆ, ಅರವಿಂದ್ ಬೋಳಾರ್ ಅವರ ಹೇಳಿಕೆಯನ್ನು ಬೆಂಬಲಿಸಿರುವ ಅಭಿಮಾನಿಗಳು, ಇದು ಸೌಹಾರ್ದತೆಯ ಉದ್ದೇಶದಿಂದ ಹಾಗೂ ತಮ್ಮನ್ನು ಹೆಚ್ಚು ಪ್ರೀತಿಸಿದ ಅಭಿಮಾನಿಗಳನ್ನು ಸ್ಮರಿಸುವ ನಿಟ್ಟಿನಲ್ಲಿ ಆಡಿದ ಮಾತು ಎಂದು ಹೇಳಿದ್ದಾರೆ.

You may also like