Home » ಭಿಕ್ಷುಕನ ವೇಷ ಧರಿಸಿ ಭಿಕ್ಷಾಟನೆ ಮಾಡಿದ ಶ್ರೀಮಂತ BJP ಶಾಸಕ – ಇದರ ಹಿಂದಿತ್ತು ಆ ಒಂದು ಕಾರಣ

ಭಿಕ್ಷುಕನ ವೇಷ ಧರಿಸಿ ಭಿಕ್ಷಾಟನೆ ಮಾಡಿದ ಶ್ರೀಮಂತ BJP ಶಾಸಕ – ಇದರ ಹಿಂದಿತ್ತು ಆ ಒಂದು ಕಾರಣ

0 comments

ಮಹಾರಾಷ್ಟ್ರದ ಶ್ರೀಮಂತ ಶಾಸಕರಲ್ಲಿ ಒಬ್ಬರಾದ ಬಿಜೆಪಿ ಶಾಸಕ ಪರಾಗ್ ಶಾ ಅವರು ಒಂದು ದಿನ ಮುಂಬೈನ ಬೀದಿಯಲ್ಲಿ ಭಿಕ್ಷುಕನ ವೇಷ ಧರಿಸಿ ಭಿಕ್ಷೆ ಬೇಡಿದ್ದಾರೆ. ಇದಕ್ಕೆ ಕಾರಣವೇನೆಂದು ತಿಳಿದರೆ ನೀವು ಕೂಡ ಅಚ್ಚರಿ ಪಡುತ್ತೀರಾ.

ಘಾಟ್‌ಕೋಪರ್ (ಪೂರ್ವ) ಕ್ಷೇತ್ರವನ್ನು ಪ್ರತಿನಿಧಿಸುವ ಪರಾಗ್ ಶಾ ಭಿಕ್ಷುಕನ ವೇಷದಲ್ಲಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆರಂಭದಲ್ಲಿ ವಿಡಿಯೋ ಕಂಡ ಹಲವರು ಅಚ್ಚರಿಗೊಂಡಿದ್ದರು. ಬಳಿಕ ಅವರು ಉದ್ದೇಶಪೂರ್ವಕವಾಗಿ ಈ ವೇಷ ಧರಿಸಿದ್ದರು ಎಂಬುದು ತಿಳಿದುಬಂದಿದೆ.

ಈ ವಿಶಿಷ್ಟ ಪ್ರಯೋಗದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ಶಹಾ ಅವರು ರಸ್ತೆ ಬದಿಯಲ್ಲಿ ಕುಳಿತು, ಸುತ್ತಮುತ್ತಲಿನ ಜನರ ಬಳಿ ಭಿಕ್ಷೆ ಬೇಡುತ್ತಾ ಸಾಗುವುದು ಕಂಡುಬಂದಿದೆ. ಸ್ಥಳೀಯವಾಗಿ ಅತ್ಯಂತ ಪ್ರಸಿದ್ಧ ರಾಜಕಾರಣಿಯಾಗಿದ್ದರೂ ಸಹ, ಈ ರೂಪದಲ್ಲಿದ್ದ ಅವರನ್ನು ಯಾರೊಬ್ಬರೂ ಗುರುತಿಸಲು ಸಾಧ್ಯವಾಗದಿರುವುದು ವಿಶೇಷ.

ಜೈನ ಗುರುಗಳ ಸಲಹೆಯಂತೆ ವಿಭಿನ್ನ ಅನುಭವ

ವ್ಯಾಪಾರಿಯಾಗಿದ್ದು ಬಳಿಕ ರಾಜಕೀಯಕ್ಕೆ ಬಂದಿರುವ ಪರಾಗ್ ಶಾ, ತಮ್ಮ ಜೈನ ಆಧ್ಯಾತ್ಮಿಕ ಗುರು ನಮ್ರಮುನಿ ಅವರ ಸಲಹೆಯ ಮೇರೆಗೆ ಈ ಅನುಭವ ಪಡೆದಿರುವುದಾಗಿ ತಿಳಿಸಿದ್ದಾರೆ. ನಡೆಯುತ್ತಿರುವ ವಿಶೇಷ ತಿಂಗಳ ಹಿನ್ನೆಲೆಯಲ್ಲಿ ಈ ಪ್ರಯೋಗ ಕೈಗೊಂಡಿದ್ದಾಗಿ ಅವರು ಹೇಳಿದ್ದಾರೆ.

ಈ ವೇಳೆ ಮುಂಬೈ ಜನರ ಸಹಾಯ ಮನೋಭಾವವೂ ತಮ್ಮ ಗಮನಕ್ಕೆ ಬಂದಿತು ಎಂದು ಅವರು ತಿಳಿಸಿದ್ದಾರೆ.”ಯಾರೋ ಒಬ್ಬರು ನನಗೆ ₹20 ಕೊಟ್ಟು, ‘ಹೋಗಿ ಬಾಬಾ, ಊಟ ಮಾಡಿ’ ಎಂದರು. ಅಲ್ಲೊಬ್ಬ ಸಮೋಸಾ ಮಾರಾಟಗಾರನಿದ್ದ. ನಾನು ಆತನ ಬಳಿ ಹೋಗಿ ಸಮೋಸಾ ಕೇಳಿದೆ. ಆತ ಯಾವುದೇ ಹಣ ಪಡೆಯದೆ ಸಮೋಸಾ ಕೊಟ್ಟ,” ಎಂದು ಶಾ ಅನುಭವ ಹಂಚಿಕೊಂಡಿದ್ದಾರೆ. ತಮ್ಮ ಬಳಿ ಹಣವಿಲ್ಲ ಎಂದು ಹೇಳಿದ ನಂತರವೂ ಸಮೋಸಾ ಮಾರಾಟಗಾರ ನಗುತ್ತಲೇ ಆಹಾರ ನೀಡಿದ್ದಾನೆ ಎಂದು ಅವರು ಹೇಳಿದ್ದಾರೆ.

ಯಾರು ಈ ಪರಾಗ್ ಶಹಾ? 

ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಪ್ರಮುಖ ಹೆಸರು ಮಾಡಿರುವ ಪರಾಗ್ ಶಾ ಮಹಾರಾಷ್ಟ್ರದ ಅತ್ಯಂತ ಶ್ರೀಮಂತ ಶಾಸಕರಲ್ಲೊಬ್ಬರು. 2024ರ ಚುನಾವಣಾ ಅಫಿಡವಿಟ್ ಪ್ರಕಾರ ಇವರ ಒಟ್ಟು ಆಸ್ತಿ ಮೌಲ್ಯ ₹3,383 ಕೋಟಿಗೂ ಅಧಿಕ. ಮಹಾರಾಷ್ಟ್ರ ವಿಧಾನಸಭೆ ಪ್ರವೇಶಿಸುವ ಮೊದಲು ಇವರು ಬೃಹನ್ಮುಂಬೈ ಮಹಾನಗರ ಪಾಲಿಕೆಯಲ್ಲಿ (BMC) ಕಾರ್ಪೊರೇಟರ್ ಆಗಿ ಸೇವೆ ಸಲ್ಲಿಸಿದ್ದರು.

You may also like