ತನ್ನ ಹೆಂಡತಿ ಬಿಟ್ಟು ಹೋದರು ಕೂಡ ತಾನು ಹೆತ್ತ ಮಗನನ್ನು ತಂದೆಯೊಬ್ಬ ಕಷ್ಟಪಟ್ಟು ದುಡಿದು ಸಾಕಿ, ಸಲಹಿದ್ದಾನೆ. ಆದರೆ ಸುಮಾರು ಆರು ವರ್ಷಗಳ ಬಳಿಕ ಬಿಟ್ಟು ಹೋದ ಹೆಂಡತಿ ಕೋರ್ಟ್ ಮೂಲಕ ಮಗನನ್ನು ತನ್ನ ಸುಪರ್ದಿಗೆ ಪಡೆದಿದ್ದಾಳೆ. ಇದರಿಂದ ಮನನೊಂದ ತಂದೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೇರಳದಲ್ಲಿ ನಡೆದಿದೆ.
ಈ ಕರುಣಾಜನಕ ಘಟನೆ ಕೇರಳದ ಇಡುಕ್ಕಿ ಜಿಲ್ಲೆಯ ಕುಮಿಲಿಯಲ್ಲಿ ನಡೆದಿದೆ. ಖಾಸಗಿ ಬಸ್ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದ ರಂಜೀಶ್ ಎಂಬುವವರೇ ಮಗನ ಅಗಲಿಕೆಯ ನೋವಿನಲ್ಲಿ ಪ್ರಾಣ ಕಳೆದುಕೊಂಡ ದುರ್ದೈವಿ.
ಮಾಹಿತಿ ಪ್ರಕಾರ, ರಂಜೀಶ್ ಹಾಗೂ ಅವರ ಮಗ ಕೋಝಿಮಲದಲ್ಲಿ ಪೋಷಕರೊಂದಿಗೆ ವಾಸಿಸುತ್ತಿದ್ದರು. ಸುಮಾರು ಆರು ವರ್ಷಗಳ ಹಿಂದೆ ರಂಜೀಶ್ ಅವರ ಪತ್ನಿ ಕೆಲಸ ಅರಸಿ ಶಾರ್ಜಾಗೆ ತೆರಳಿದ್ದರು. ಅಲ್ಲಿಗೆ ತೆರಳಿದ ಬಳಿಕ ಪತ್ನಿ ಬೇರೊಬ್ಬ ವ್ಯಕ್ತಿಯೊಂದಿಗೆ ಸಂಬಂಧ ಬೆಳೆಸಿ, ರಂಜೀಶ್ ಅವರೊಂದಿಗಿನ ದಾಂಪತ್ಯಕ್ಕೆ ಅಂತ್ಯ ಹಾಡಿದ್ದರು. ಆರು ವರ್ಷಗಳ ಕಾಲ ಒಂಟಿಯಾದ ಮಗನನ್ನು ರಂಜೀಶ್ ಅವರೇ ಪ್ರೀತಿಯಿಂದ ಸಾಕಿ, ಎದೆಯಲ್ಲೇ ಇಟ್ಟು ಬೆಳೆಸಿದ್ದರು. ಆದರೆ, ಒಂದು ತಿಂಗಳ ಹಿಂದೆ ಶಾರ್ಜಾದಿಂದ ಮನೆಗೆ ಮರಳಿದ್ದ ಪತ್ನಿ, ಬಾಲಕನನ್ನು ತನ್ನ ವಶಕ್ಕೆ ಪಡೆಯಲು ಕಟ್ಟಪ್ಪಣ ನ್ಯಾಯಾಲಯದ ಮೆಟ್ಟಿಲೇರಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ಮಗನನ್ನು ತಾಯಿಯ ವಶಕ್ಕೆ ಒಪ್ಪಿಸಲು ಆದೇಶಿಸಿತು. ತಾನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ, ಆರು ವರ್ಷಗಳಿಂದ ಅಮ್ಮನಂತೆ ಸಲಹಿದ್ದ ಮಗ ತನ್ನಿಂದ ದೂರವಾದ ತೀವ್ರ ಮಾನಸಿಕ ಆಘಾತದಿಂದ ರಂಜೀಶ್ ಚೇತರಿಸಿಕೊಳ್ಳಲಿಲ್ಲ. ಮಗನ ಅಗಲಿಕೆಯ ನೋವನ್ನು ತಾಳಲಾರದೆ ರಂಜೀಶ್ ಒಂದು ವಾರದ ಹಿಂದೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಕಳೆದ ಬುಧವಾರ ಕೊನೆಯುಸಿರೆಳೆದರು.
ರಂಜೀಶ್ ಅವರ ನಿಧನದ ಬಳಿಕ, ಆರಂಭದಲ್ಲಿ ಪತ್ನಿಯು ಮಗನನ್ನು ತನ್ನ ತಂದೆಯ ಅಂತಿಮ ದರ್ಶನಕ್ಕಾಗಲಿ ಅಥವಾ ಅಂತ್ಯಕ್ರಿಯೆಯಲ್ಲಿ ಭಾಗವಹಿಸುವುದಕ್ಕಾಗಲಿ ಕಳುಹಿಸಲು ಒಪ್ಪಲಿಲ್ಲ. ಬಳಿಕ ಸಂಬಂಧಿಕರು ಮತ್ತೆ ನ್ಯಾಯಾಲಯದ ಮೆಟ್ಟಿಲೇರಿ, ಕೋರ್ಟ್ ಮಧ್ಯಸ್ಥಿಕೆಯಿಂದ ಮಗನನ್ನು ಅಂತ್ಯಕ್ರಿಯೆಗೆ ಕರೆತರಲಾಯಿತು” ಎಂದು ಸ್ಥಳೀಯ ಪಂಚಾಯತ್ ಸದಸ್ಯ ರಾಬಿನ್ ಕರಕ್ಕಡನ್ ಬೇಸರ ವ್ಯಕ್ತಪಡಿಸಿದ್ದಾರೆ.




