ಸೋಮವಾರ, 26 ಅಕ್ಟೋಬರ್ 2026
Trending

ಕೌಟುಂಬಿಕ ಕಲಹ – ಮೂಗು ಕೊಯ್ದ ಪತಿ, ಮರ್ಮಾಂಗಕ್ಕೆ ಕಚ್ಚಿದ ಪತ್ನಿ !

ಮಾತಿನ ಚಕಮಕಿಯ ವೇಳೆ ಪತಿಯೊಬ್ಬ ತನ್ನ ಪತ್ನಿಯ ತಲೆಗೆ ಹೊಡೆದು ಆಕೆಯ ಮೂಗನ್ನೇ ಕತ್ತರಿಸಿ ಹಾಕಿದ್ದು, ಇದಕ್ಕೆ ಸಿಟ್ಟಾದ ಪತ್ನಿ ಗಂಡನ ಮರ್ಮಾಂಗವನ್ನೇ ಕಚ್ಚಿದ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಹರ್ದೋಯಿ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. 

Sponsored

ಸಾಧನಾ ಎಂಬ ಮಹಿಳೆ ತನ್ನ ಪತಿ ದೀಪಕ್, ಅತ್ತೆ ಮತ್ತು ಮಾವನ ವಿರುದ್ಧ ಗಂಭೀರ ಆರೋಪ ಮಾಡಿದ್ದಾಳೆ. ಜಗಳದ ವೇಳೆ ಅತ್ತೆ-ಮಾವ ತನ್ನ ಕೈಗಳನ್ನು ಹಿಡಿದುಕೊಂಡಿದ್ದು, ಪತಿ ತನ್ನ ತಲೆಗೆ ಹೊಡೆದು, ಮೂಗನ್ನು ಕೊಯ್ದು ಚರಂಡಿಗೆ ಎಸೆದಿದ್ದಾನೆ ಎಂದು ಆಕೆ ಆಪಾದಿಸಿದ್ದಾಳೆ. ಮಾಹಿತಿ ತಿಳಿದ ತಕ್ಷಣವೇ ಸ್ಥಳಕ್ಕೆ ಧಾವಿಸಿದ ಗಸ್ತು ಸಿಬ್ಬಂದಿ ಗಾಯಾಳು ಮಹಿಳೆ ಹಾಗೂ ಆಕೆಯ ಪತಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಗಂಭೀರವಾಗಿ ಗಾಯಗೊಂಡ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ ರಕ್ಷಣಾ ಇಲಾಖೆ ಇಬ್ಬರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ.

ಆದರೆ ಪತಿಯ ಕುಟುಂಬಸ್ಥರು ಈ ಘಟನೆಗೆ ಸಂಬಂಧಿಸಿದಂತೆ ಸಂಪೂರ್ಣ ವಿಭಿನ್ನವಾದ ಪ್ರತ್ಯೇಕ ಆರೋಪವನ್ನು ಮಾಡಿದ್ದಾರೆ. ದೀಪಕ್ ಅವರ ತಾಯಿ ನೀಡಿರುವ ಹೇಳಿಕೆಯ ಪ್ರಕಾರ, ಸಾಧನಾ ಈ ಹಿಂದೆ ದೀಪಕ್‌ನ ಸ್ನೇಹಿತನ ಜೊತೆಯಲ್ಲೇ ಓಡಿಹೋಗಿದ್ದಳು. ಆಗ ಪೊಲೀಸರ ಸಮ್ಮುಖದಲ್ಲೇ ರಾಜಿ ಪಂಚಾಯಿತಿ ಮಾಡಲಾಗಿತ್ತು. ಗುರುವಾರ ಆಕೆ ಮನೆಗೆ ಮರಳಿ ಬಂದು ತನ್ನ ಮೂವರು ಮಕ್ಕಳನ್ನು ಬಲವಂತವಾಗಿ ತನ್ನೊಂದಿಗೆ ಕರೆದೊಯ್ಯಲು ಯತ್ನಿಸಿದಾಗ ಜಗಳ ಶುರುವಾಗಿದೆ. ಈ ಗಲಾಟೆಯ ನಡುವೆ ಸಾಧನಾ ತನ್ನ ಪತಿಯ ಮರ್ಮಾಂಗಕ್ಕೆ ಕಚ್ಚಿದ್ದಾಳೆ ಹಾಗೂ ಸ್ವತಃ ತಾನೇ ನೆಲಕ್ಕೆ ತಲೆ ಬಡಿದುಕೊಂಡು ಗಾಯ ಮಾಡಿಕೊಂಡಿದ್ದಾಳೆ ಎಂದು ಅತ್ತೆ ಆರೋಪಿಸಿದ್ದಾರೆ.

ದೀಪಕ್ ಮತ್ತು ಸಾಧನಾ ದಂಪತಿಗೆ ಮದುವೆಯಾಗಿ ಸುಮಾರು 10 ವರ್ಷಗಳಾಗಿದ್ದು, ಇವರಿಗೆ 8, 6 ಮತ್ತು 3 ವರ್ಷದ ಮೂವರು ಹೆಣ್ಣು ಮಕ್ಕಳಿದ್ದಾರೆ. ಈವರೆಗೆ ಮಹಿಳೆಯ ಕಡೆಯಿಂದ ಯಾವುದೇ ಅಧಿಕೃತ ಲಿಖಿತ ದೂರು ಸಲ್ಲಿಕೆಯಾಗಿಲ್ಲ, ಆದರೆ ಪತಿಯ ತಾಯಿ ಠಾಣೆಗೆ ದೂರು ಸಲ್ಲಿಸಿದ್ದಾರೆ. ಎರಡೂ ಕಡೆಯ ಹೇಳಿಕೆಗಳು ಮತ್ತು ಸನ್ನಿವೇಶಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ನಂತರ ಮುಂದಿನ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.