ಬೆಂಗಳೂರು: ಪರವಾನಗಿ ಇಲ್ಲದೆ ಔಷಧಗಳನ್ನು ಸಂಗ್ರಹಿಸುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಕರ್ನಾಟಕ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ (FDA) ಇಲಾಖೆಯ ಔಷಧ ಜಾರಿ ವಿಭಾಗ ಅಧಿಕಾರಿಗಳು ಇ-ಕಾಮರ್ಸ್ ವೇದಿಕೆಗಳಿಗೆ ಸಂಬಂಧಿಸಿದ ಔಷಧ ಸಂಗ್ರಹ ಘಟಕಗಳ ಮೇಲೆ ದಾಳಿ ನಡೆಸಿದ್ದಾರೆ.


ದಾಳಿ ವೇಳೆ ಎರಡು ಸ್ಥಳಗಳಲ್ಲಿ ಔಷಧ ಸಂಗ್ರಹಿಸಲು ಅಗತ್ಯವಿರುವ ಪರವಾನಗಿ ಇಲ್ಲದಿರುವುದು ಪತ್ತೆಯಾಗಿದ್ದು, ₹4 ಲಕ್ಷಕ್ಕೂ ಅಧಿಕ ಮೌಲ್ಯದ ಔಷಧಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಇದರ ಜೊತೆಗೆ ಔಷಧಗಳ ಅವಧಿ ಮೀರಿರುವುದು, ತಪ್ಪು ಲೇಬಲಿಂಗ್ ಹಾಗೂ ನಿಗದಿತ ದರಕ್ಕಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ ಎಂಬ ದೂರುಗಳೂ ಅಧಿಕಾರಿಗಳ ಗಮನಕ್ಕೆ ಬಂದಿವೆ.
ಈ ಹಿನ್ನೆಲೆಯಲ್ಲಿ ಇ-ಕಾಮರ್ಸ್ ಮೂಲಕ ನಡೆಯುತ್ತಿರುವ ಔಷಧ ಮಾರಾಟದಲ್ಲಿ ಅಕ್ರಮಗಳಿಗೆ ಕಡಿವಾಣ ಹಾಕಲು ಆರೋಗ್ಯ ಇಲಾಖೆ ಮುಂದಾಗಿದೆ. ಈ ಸಂಬಂಧ ಆರೋಗ್ಯ ಸಚಿವ ಯು.ಟಿ. ಖಾದರ್ ಅವರು ಸೆಪ್ಟೆಂಬರ್ 8ರಂದು ಅಧಿಕಾರಿಗಳೊಂದಿಗೆ ಸಭೆ ಕರೆದಿದ್ದು, ಇ-ಕಾಮರ್ಸ್ ಮೂಲಕ ಔಷಧ ಮಾರಾಟಕ್ಕೆ ಹೊಸ ನಿಯಮಗಳನ್ನು ಜಾರಿಗೆ ತರುವ ಕುರಿತು ಚರ್ಚೆ ನಡೆಯಲಿದೆ.

